ಕಳ್ಳಭಟ್ಟಿ ದುರಂತ: ಸಾವಿನ ಸಂಖ್ಯೆ 62ಕ್ಕೆ ಏರಿಕೆ

0

ಚಂಡೀಗಡ, ಆ. 1- ಪಂಜಾಬ್‌ನಲ್ಲಿ ನಡೆದ ಕಳ್ಳಭಟ್ಟಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 62ಕ್ಕೆ ಏರಿಕೆಯಾಗಿದ್ದು, ತರ್ನ್‌ ಟರಾನ್‌ ಜಿಲ್ಲೆಯಲ್ಲಿ ಶನಿವಾರ ಮತ್ತೆ 23 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತರ್ನ್‌ ಟರಾನ್‌ ಜಿಲ್ಲೆಯೊಂದರಲ್ಲಿ ಮೃತಪಟ್ಟವರ ಸಂಖ್ಯೆ 42ಕ್ಕೆ ತಲುಪಿದೆ ಎಂದು ಜಿಲ್ಲಾಧಿಕಾರಿ ಕುಲ್ವಂತ್‌ ಸಿಂಗ್‌ ತಿಳಿಸಿದ್ದಾರೆ. ಅಮೃತಸರ ದಲ್ಲಿ 11 ಮತ್ತು ಗುರುದಾಸ್‌ಪುರದ ಬಟಾಲದಲ್ಲಿ ಈವರೆಗೆ 9 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಮೃತರ ಮರಣೋತ್ತರ ಪರೀಕ್ಷೆ ನಡೆಸುವ ಸಂಬಂಧ ಕುಟುಂಬಸ್ಥರು ಹೇಳಿಕೆ ದಾಖಲಿಸಲು ಮುಂದೆ ಬರುತ್ತಿಲ್ಲ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏತನ್ಮಧ್ಯೆ, ಗುರುದಾಸ್‌ಪುರ ಜಿಲ್ಲಾಧಿಕಾರಿ ಮೊಹಮ್ಮದ್ ಇಶ್ಫಾಕ್‌ ಪ್ರತಿಕ್ರಿಯಿಸಿದ್ದು, ‘ಕೆಲವು ಕುಟುಂಬಸ್ಥರು ತಮ್ಮ ಮನೆಯವರು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಅಲ್ಲದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 10 ಜನರನ್ನು ಬಂಧಿಸಿದ್ದಾರೆ.

ಘಟನೆ ವಿವರ ; ಪಂಜಾಬ್‌ನ ಮೂರು ಜಿಲ್ಲೆಗಳಲ್ಲಿ ನಕಲಿ ಮದ್ಯ ಸೇವಿಸಿ ಒಟ್ಟು 38 ಜನರು ಮೃತಪಟ್ಟಿದ್ದಾರೆ. ಈ ಕುರಿತು ನ್ಯಾಯಾಂಗ‌ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಶುಕ್ರವಾರ ಆದೇಶಿಸಿದ್ದರು.

‘ಸಾವಿಗೀಡಾದವರು ಅಮೃತಸರ, ಬಟಾಲ ಮತ್ತು ತರ್ನ್‌ ಟರಾನ್‌ ಜಿಲ್ಲೆಗಳ ನಿವಾಸಿಗಳಾಗಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ‘ಅಮೃತಸರದ ತಾರ್‌ಸಿಕ್ಕಾದ ಮುಚ್ಚಾಲ್‌ ಹಾಗೂ ತಾಂಗ್ರಾ ಗ್ರಾಮಗಳಲ್ಲಿ ಮೊದಲು ಈ ಪ್ರಕರಣ ಬೆಳಕಿಗೆ ಬಂದಿತು. ಬುಧವಾರ ರಾತ್ರಿ ಇಲ್ಲಿ ಒಟ್ಟು 5 ಜನರು ಸತ್ತಿದ್ದರು. ಗುರುವಾರ ಸಂಜೆ ಮುಚ್ಚಾಲ್‌ನಲ್ಲಿ ಮತ್ತಿಬ್ಬರು ಹಾಗೂ ಅಮೃತಸರದ ಶ್ರೀ ಗುರು ರಾಮದಾಸ್‌ ಆಸ್ಪತ್ರೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದ. ಬಳಿಕ ಮುಚ್ಚಾಲ್‌ ಮತ್ತು ಬಟಾಲದಲ್ಲಿ ತಲಾ ಇಬ್ಬರು ಸತ್ತಿದ್ದರು’ ಎಂದು  ಡಿಜಿಪಿ ದಿನಕರ್‌ ಗುಪ್ತಾ ಹೇಳಿದ್ದಾರೆ.

‘ಶುಕ್ರವಾರ ಬಟಾಲ ಹಾಗೂ ಟರಾನ್‌ನಲ್ಲಿ ಕ್ರಮವಾಗಿ 5ಮತ್ತು 4 ಜನರು ಸಾವಿಗೀಡಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಚ್ಚಾಲ್‌ ಗ್ರಾಮದ ನಿವಾಸಿ ಬಲ್ವಿಂದರ್‌ ಕೌರ್‌ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಐಪಿಸಿ ಸೆಕ್ಷನ್‌ 304 ಮತ್ತು ಅಬಕಾರಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.