ದೆಹಲಿಯಲ್ಲೇ ಸಚಿವ ಸುರೇಶ ಅಂಗಡಿ ಅಂತ್ಯಕ್ರಿಯೆ

0

ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಭಾವಚಿತ್ರಕ್ಕೆ ಪುಷ್ಪಗುಚ್ಛ ಇಡುವ ಮೂಲಕ ಜಗದೀಶ್ ಶೆಟ್ಟರ್ ನಮನ ಸಲ್ಲಿಸಿದರು.

 

ಹೊಸದಿಲ್ಲಿ, ಸೆ. 24- ಕೇಂದ್ರದ ಮಾರ್ಗದರ್ಶಿ ಪ್ರಕಾರ ನವದೆಹಲಿಯ ದ್ವಾರಕಾದಲ್ಲಿರುವ‌ ರುದ್ರಭೂಮಿಯಲ್ಲಿ ಸುರೇಶ್ ಅಂಗಡಿ ಅವರ ಅಂತ್ಯ ಕ್ರಿಯೆ ಗುರುವಾರ ಸಂಜೆ ನಾಲ್ಕು ಗಂಟೆ ವೇಳೆಗೆ‌ ನಡೆಯಲಿದೆ ಎಂದು ಸಚಿವ‌ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಅಂಗಡಿ ಅವರ ಓರ್ವ ಪುತ್ರಿ ಬೆಳಗಾವಿಯಿಂದ ನವದೆಹಲಿಗೆ ಬರಲಿದ್ದು, ಅವರು ಬಂದ ನಂತರ ‌ಅಂತ್ಯಕ್ರಿಯೆ‌ ನೆರವೇರಿಸಲಾಗುವುದು. ಬೆಳಗಾವಿ ಯ ಕೆ.ಕೆ.‌ಕೊಪ್ಪ‌ಗ್ರಾಮಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲು ರಾಜ್ಯ ಸರ್ಕಾರದಿಂದ ಸಾಕಷ್ಟು ಪ್ರಯತ್ನ ಮಾಡಲಾಯಿತು. ಆದರೆ, ಕೇಂದ್ರ ಸರ್ಕಾರದ ಕೋವಿಡ್ ಮಾರ್ಗದರ್ಶಿ ಅನ್ವಯ ಪಾರ್ಥಿವ ಶರೀರವನ್ನು ಸಾಗಿಸುವುದು‌ ಅಸಾಧ್ಯವಾಗಿದೆ ಎಂದು ಶೆಟ್ಟರ್ ಹೇಳಿದರು.

ಪಾರ್ಥಿವ ಶರೀರ ತರಲು ಕರೋನಾ ಅಡ್ಡಿ

ಕೋವಿಡ್‌ನಿಂದ ನವದೆಹಲಿಯ ಏಮ್ಸ್‌ ಅಸ್ಪತ್ರೆಯಲ್ಲಿ ಬುಧವಾರ ನಿಧನರಾದ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಅಂತ್ಯಕ್ರಿಯೆಯನ್ನು ದೆಹಲಿಯಲ್ಲೇ ನಡೆಸಲು ನಿರ್ಧರಿಸಲಾಗಿದೆ.

ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಬೇಕು. ಇಲ್ಲೇ ಅಂತ್ಯಕ್ರಿಯೆ ನಡೆಸಬೇಕು ಎಂದು ಕುಟುಂಬದವರು ಹಾಗೂ ಅಭಿಮಾನಿಗಳ ಬಯಕೆ ಯಾಗಿತ್ತು. ಈ ನಿಟ್ಟಿನಲ್ಲಿ ಅಂಗಡಿ ಅವರ ಬೀಗರೂ ಆಗಿರುವ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಸಾಕಷ್ಟು ಪ್ರಯತ್ನ ಆರಂಭಿಸಿದ್ದರು.

ರಾಜ್ಯ ಸರ್ಕಾರದಿಂದಲೂ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ, ಕೋವಿಡ್ ನಿಯಮಾವಳಿ ಪ್ರಕಾರ ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಲು ಅವಕಾಶ ಆಗುತ್ತಿಲ್ಲ ಎಂದು ತಿಳಿದು ಬಂದಿದೆ. ದೆಹಲಿಯ ದ್ವಾರಕಾ ಸೆಕ್ಟರ್ 24ರಲ್ಲಿ ಅಂತ್ಯಕ್ರಿಯೆ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.