ಜ್ವರ ನಿರ್ಲಕ್ಷಿಸಿದ್ದು ಸುರೇಶ ಅಂಗಡಿ ಸಾವಿಗೆ ಕಾರಣವಾಯಿತೇ?

0

ಹೊಸದಿಲ್ಲಿ, ಸೆ. 24- ಆರೋಗ್ಯದ‌ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದ ರೈಲ್ವೇ ಖಾತೆ‌ ರಾಜ್ಯ ಸಚಿವ‌ ಸುರೇಶ್ ಅಂಗಡಿ (65) ಕರೋನಾ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಪ್ರಾಣಕ್ಕೇ ಸಂಚಕಾರ ತರಲು ಕಾರಣವಾಗಿದೆ.

ಸೆಪ್ಟೆಂಬರ್ ಮೊದಲ ವಾರ ಹಲ್ಲು ನೋವು ಕಾಣಿಸಿಕೊಂಡ ಕಾರಣ ಬೆಳಗಾವಿಯಲ್ಲಿ ಚಿಕಿತ್ಸೆ ಪಡೆದಿದ್ದ ಅಂಗಡಿ, ನಂತರ ಕಾಣಿಸಿಕೊಂಡ ತೀವ್ರ ಜ್ವರವನ್ನು ನಿರ್ಲಕ್ಷಿಸಿ ಪ್ರಯಾಣ ಮಾಡಿದ್ದು ಅವರ ಪ್ರಾಣ ಹೋಗಲು ಕಾರಣ ಎಂದು ಹೇಳಲಾಗುತ್ತಿದೆ.

ಹಲ್ಲು ನೋವಿನಿಂದಾಗಿ ಜ್ವರ‌ ಬಂದಿರಬಹುದು ಎಂದೇ ಭಾವಿಸಿದ್ದ ಸುರೇಶ ಅಂಗಡಿ, ಮುಂಬೈಗ ತೆರಳಿ ಅಲ್ಲಿಂದ ದೆಹಲಿಗೆ ‌ಪ್ರಯಾಣ ಬೆಳೆಸಿ ದ್ದರು. ದೆಹಲಿ ತಲುಪಿದ ನಂತರವೂ ಎರಡು- ಮೂರು ದಿನಗಳ ಕಾಲ ಕೋವಿಡ್ ಪರೀಕ್ಷೆ‌ ಮಾಡಿಸಿಕೊಳ್ಳುವಲ್ಲಿ ವಿಳಂಬ ಮಾಡಿದ್ದರು. ಜ್ವರ ತೀವ್ರವಾಗಿ ಗಂಟಲು ನೋವು, ಕೆಮ್ಮು ಕಾಣಿಸಿಕೊಂಡ‌ ಬಳಿಕವಷ್ಟೇ ಅವರು ಏಮ್ಸ್ ಗೆ‌ ದಾಖಲಾದರು ಎಂದು ಅವರ ಆಪ್ತ ಮೂಲಗಳು ತಿಳಿ ಸಿವೆ.

ಚಿಕಿತ್ಸೆಯ ಆರಂಭದ ಹಂತದಲ್ಲಿ ಸ್ಪಂದಿಸಿದ್ದ ಅಂಗಡಿ ಅವರ ಆರೋಗ್ಯ ಉಲ್ಬಣಗೊಂಡಿದ್ದರಿಂದ ಪ್ಲಾಸ್ಮಾ ಚಿಕಿತ್ಸೆಯನ್ನೂ ನೀಡಲಾಗಿತ್ತು. ಅದೂ ಫಲ ನೀಡಲಿಲ್ಲ ಎಂದು ಅವರ ಸಂಬಂಧಿ, ಸಚಿವ ‌ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ. ಜ್ವರ ಕಾಣಿಸಿಕೊಂಡ ಸಮಯದಲ್ಲಿ ಬೆಳಗಾವಿಯಲ್ಲಿ ಚಿಕಿತ್ಸೆ ಪಡೆದು ಮುನ್ನೆಚ್ಚರಿಕೆ ವಹಿಸಿದ್ದರೆ ಅಂಗಡಿ ಅವರು ಗುಣಮುಖ ಆಗಬಹುದಿತ್ತು. ಯಾರೇ ಆಗಲಿ, ಕೊರೊನಾ ಲಕ್ಷಣ ಕಾಣಿಸಿಕೊಂಡಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕು. ನಿರ್ಲಕ್ಷ್ಯ ಮಾಡ ಕೂಡದು ಎಂದು ಆಪ್ತರು ಅಭಿಪ್ರಾಯ ಪಡುತ್ತಾರೆ.