ಶಾಲಾ ಆರಂಭಿಸದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ

0

ಬೆಂಗಳೂರು: ಸದ್ಯದ ಪರಿಸ್ಥಿತಿಯಲ್ಲಿ  ಶಾಲಾ ಆರಂಭಿಸದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ಕೊರೊನಾ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ದೇಶದ ಉಳಿದೆಡೆಗಿಂತ ಕರ್ನಾಟಕದಲ್ಲಿ ಭೀಕರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಟೆಸ್ಟ್​ಗಳ ಸಂಖ್ಯೆ ಹೆಚ್ಚಿಸಿದಂತೆಲ್ಲಾ ಪ್ರಕರಣಗಳ ಸಂಖ್ಯೆಯೂ ಹೆಚ್ಚು ಪತ್ತೆಯಾಗುತ್ತಿರುವುದು ಆತಂಕ ಹುಟ್ಟಿಸುತ್ತಿದೆ. ತಜ್ಞರ ಮಾತುಗಳ ಪ್ರಕಾರ ಈ ವರ್ಷ ಜೀವ ಉಳಿಸಿಕೊಳ್ಳಬೇಕೇ ಹೊರತು ಉಳಿದೆಲ್ಲವನ್ನು ನಗಣ್ಯವೆಂದು ಭಾವಿಸಬೇಕು.

ಹಿಂದೆ ವಿವಿಧ ತರಗತಿಗಳಿಗೆ ಪರೀಕ್ಷೆಗಳನ್ನು ನಡೆಸುವ ಸಂದರ್ಭದಲ್ಲಿ ಸ್ವತ: ನಾನೇ ಬೆಂಬಲಿಸಿದ್ದೆ. ಆದರೆ, ಇಂದಿನ ಪರಿಸ್ಥಿತಿಯೆ ಬೇರೆಯಾಗಿದೆ. ಅಂಕಿ ಅಂಶಗಳನ್ನು ತಿರುಚುವ ಮೂಲಕ ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಸರ್ಕಾರದ ಬೆನ್ನನ್ನು ಜನರು ತಟ್ಟಬೇಕೇ ಹೊರತು ಸರ್ಕಾರವೇ ತಟ್ಟಿಕೊಂಡರೆ ಹಾಸ್ಯಾಸ್ಪದವಾಗುತ್ತದೆ ಎಂದಿದ್ದಾರೆ.

ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳನ್ನು ಯಾವ ಕಾರಣಕ್ಕೂ ತೆರೆಯಬಾರದೆಂದು ಆಗ್ರಹಿಸುತ್ತೇನೆ. ನಗರ ಪ್ರದೇಶಗಳ ಖಾಸಗಿ ಶಾಲೆಗಳ ಮಕ್ಕಳಿಗೆ ಆನ್‍ಲೈನ್ ತರಗತಿಗಳು ನಡೆಯುತ್ತಿವೆ. ರಾಜ್ಯದ ಎಲ್ಲಾ ಮಕ್ಕಳಿಗೂ ಆನ್‍ಲೈನ್ ತರಗತಿಗಳನ್ನು ಪ್ರಾರಂಭಿಸುವುದು ಕೂಡ ಅಗತ್ಯ ಎಂದು ಭಾವಿಸುತ್ತೇನೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ಸರ್ಕಾರ ಕಲ್ಪಿಸಿಕೊಡಬೇಕೆಂದು ಒತ್ತಾಯಿಸುತ್ತೇನೆ. ಪ್ರಸ್ತುತ ಶೈಕ್ಷಣಿಕ ವರ್ಷದ ಎಲ್ಲಾ ವಿದ್ಯಾರ್ಥಿಗಳನ್ನು ಪಾಸು ಮಾಡಿ ಮುಂದಿನ ತರಗತಿಗಳಿಗೆ ಕಳುಹಿಸಬೇಕೆಂದು ಮತ್ತು ಪರಿಸ್ಥಿತಿ ಹತೋಟಿಗೆ ಬಂದ ನಂತರ ಮತ್ತೊಮ್ಮೆ ಎಲ್ಲರ ಅಭಿಪ್ರಾಯಗಳನ್ನು ಪಡೆದು ಶಾಲೆಗಳನ್ನು ಪ್ರಾರಂಭಿಸಬಹುದೆಂದು ತಮಗೆ ಸಲಹೆ ನೀಡಲು ಬಯಸುತ್ತೇನೆ.