ಪೊಲೀಸರ ಭರ್ಜರಿ ಭೇಟೆ

0

ವಿಜಯಪುರ, ಆ. 22- ಜಿಲ್ಲೆಯಲ್ಲಿ ನಡೆದ ಕೊಲೆ‌, ಬೈಕ್‌, ಮನೆ ಕಳವು, ಗಾಂಜಾ, ಕ್ರಿಕೆಟ್‌ ಬೆಟ್ಟಿಂಗ್‌, ಜೂಜಾಟ, ಮಟ್ಕಾದಲ್ಲಿ ತೊಡಗಿದ್ದ ಆರೋಪಿ ಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಮಪ್‌ ಅಗರವಾಲ್‌, 50 ಬೈಕ್‌ ವಶಪಡಿಸಿಕೊಂಡು ತಾಳಿಕೋಟೆ ಠಾಣೆ ಪೊಲೀಸರು ನಾಲ್ವರು ಅಂತರ ಜಿಲ್ಲಾ ಬೈಕ್‌ ಕಳ್ಳರನ್ನು ಬಂಧಿಸಿದ್ದು, ಅವರಿಂದ ರೂ. 30 ಲಕ್ಷ ಮೌಲ್ಯದ 50 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಜಮ್ಮಲದಿನ್ನಿಯ ರಾಮಣ್ಣ ಹಳ್ಳೂರ ಎಂಬುವವರು ಅ.19ರಂದು ದಾಖಲಿಸಿದ್ದ ಬೈಕ್‌ ಕಳವು ಪ್ರಕರಣವನ್ನು ಬೆನ್ನು ಹತ್ತಿದಾಗ ಅಂತರ್ ಜಿಲ್ಲಾ ಬೈಕ್‌ ಕಳವು ಜಾಲ ಪತ್ತೆಯಾಗಿದೆ. ಈ ಸಂಬಂಧ ಬಿಳೆಬಾವಿ ಗ್ರಾಮದ ಮೌನೇಶ್ ಬಡಿಗೇರ (28), ನಿಂಗಣ್ಣ ಪೂಜಾರಿ(38), ಕೋಡೆಕಲ್‌ನ ಮೀರಾಸಾಬ್‌ ಬಳಿಗಾರ(29), ಮೆಹಬೂಬ್‌ ಬಳಿಗಾರ(28) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಕದ್ದಿರುವ ಎಲ್ಲ ಬೈಕುಗಳು ‘ಹಿರೊ’ ಕಂಪನಿಗೆ ಸೇರಿದ ಸ್ಪೆಂಡರ್‌ ಬೈಕುಗಳಾಗಿವೆ. ಅದರಲ್ಲೂ ಸಿಲ್ವರ್‌ ಕಲರ್‌ ಬೈಕುಗಳೇ ಇವರ ಟಾರ್ಗೆಟ್‌ ಆಗಿದ್ದವು. ಈ ಬೈಕುಗಳ ಕೀಯನ್ನು ಸುಲಭವಾಗಿ ತೆಗೆಯಬಹುದು ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಹೇಳಿದರು.

ಮನೆಗಳ್ಳರ ಬಂಧನ: ಬಸವನ ಬಾಗೇವಾಡಿ ಪಟ್ಟಣದಲ್ಲಿ ಮೂರು ತಿಂಗಳ ಹಿಂದೆ ರಾತ್ರಿ ವೇಳೆ ಮನೆ ಕೀಲಿ ಮುರಿದು ಕಳವು ಮಾಡಿದ್ದ ಪ್ರಕ ರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಬಸವನ ಬಾಗೇವಾಡಿಯ ಇಂದ್ರಾನಗರದ ಸೊಹೈಲ್‌ ಇನಾಂದಾರ(21), ಬಸವನ ನಗರದ ಆಕಾಶ ಕೋಲ್ಕಾರ(19) ಎಂಬುವವರನ್ನು ಬಂಧಿ ಸಿ, ಅವರಿಂದ 40 ಗ್ರಾಂ ಚಿನ್ನಾಭರಣ, 190 ಗ್ರಾಂ ಬೆಳ್ಳಿಯ ಆಭರಣ ಸೇರಿದಂತೆ ಒಟ್ಟು ರೂ. 2.15 ಲಕ್ಷ್ಮ ಮೌಲ್ಯದ ಚಿನ್ನಾಭರಣವನ್ನು ಸಿಪಿಐ ಸೋಮಶೇಖರ ಜುಟ್ಟಿಲ್‌, ಪಿಎಸ್‌ಐ ಚಂದ್ರಶೇಖರ ವೈ.ಹೆರಕಲ್‌ ನೇತೃತ್ವದ ತನಿಖಾ ತಂಡ ವಶಪಡಿಸಿಕೊಂಡಿದೆ.

ಜಿಲ್ಲೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ಮತ್ತು ಮಾರಾಟ ಮಾಡುತ್ತಿದ್ದ ಒಟ್ಟು 18 ಪ್ರಕರಣಗಳನ್ನು ಪತ್ತೆ ಹಚ್ಚಿ 287 ಕೆ.ಜಿ.ಗಾಂಜಾ ವಶಪಡಿಸಿ ಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಒಟ್ಟು 16 ಪ್ರಕರಣಗಳನ್ನು ದಾಖಲಿಸಿ, 32 ಆರೋಪಿಗಳನ್ನು ಬಂಧಿಸಿ, ಅವರಿಂದ ರೂ. 6,52,770 ನಗದು, 39 ಮೊಬೈಲ್‌ ಫೋನ್‌, 2 ಟಿವಿ, ಒಂದು ಡಸ್ಟರ್‌ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಎಸ್‌ಪಿ ಅಭಿನಂದಿಸಿ, ಬಹುಮಾನ ನೀಡಿದರು. ಹೆಚ್ಚು ವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ ಅರಸಿದ್ದಿ ಇದ್ದರು.