ಪ್ರವಾಹದ ನಷ್ಟ ಕುರಿತು ಚರ್ಚಿಸಲು ಶೀಘ್ರ ವಿಶೇಷ ಅಧಿವೇಶನ ‌ಕರೆಯಬೇಕು‌ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ

0

ಕಲಬುರ್ಗಿ, ಅ. 26- :ರಾಜ್ಯದ ಇಪ್ಪತ್ತು ಜಿಲ್ಲೆಗಳಲ್ಲಿ ಸಂಭವಿಸಿರುವ ಪ್ರವಾಹದ ನಷ್ಟ ಕುರಿತು ಚರ್ಚಿಸಲು ಶೀಘ್ರ ವಿಶೇಷ ಅಧಿವೇಶನ ‌ಕರೆಯಬೇಕು‌ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲಿ ‌ರಾಜ್ಯ ಸರ್ಕಾರ ‌ಸಂಪೂರ್ಣ ವಿಫಲವಾಗಿದೆ. ಇದುವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರವಾಹ ಸಂತ್ರಸ್ತರಿಗಾಗಿ ನಯಾಪೈಸೆ ಬಿಡುಗಡೆ ‌ಮಾಡಿಲ್ಲ. ಬೆಳೆ ನಷ್ಟದಿಂದಾಗಿ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ ಎಂದರು.

ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ಮೂರು ಸಣ್ಣ ನೀರಾವರಿ ‌ಕೆರೆಗಳು ಒಡೆದಿವೆ. ಇದರಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಕೂಡಲೇ ಇಂತಹ ಒಡೆದ ಕೆರೆಗಳನ್ನು ದುರಸ್ತಿ ಮಾಡಬೇಕು. ರಾಜ್ಯಕ್ಕೆ ಕೇಂದ್ರ ಸರ್ಕಾರ ನಿರಂತರವಾಗಿ ಅನ್ಯಾಯ ಮಾಡುತ್ತಿದ್ದು, 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ರೂ 5495 ಕೋಟಿ ವಿಶೇಷ ಅನುದಾನಕ್ಕೆ ಶಿಫಾರಸು ಮಾಡಿತ್ತು. ಆದರೆ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಶಿಫಾರಸು ವಾಪಸ್ ಪಡೆಯುವಂತೆ ಪತ್ರ ಬರೆದಿದ್ದಾರೆ ಎಂದು ‌ಟೀಕಿಸಿದರು.

ರಾಜ್ಯದಿಂದ 25 ಜನ ಬಿಜೆಪಿ ‌ಸಂಸದರು ಆಯ್ಕೆಯಾಗಿದ್ದಾರೆ. ಆದರೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಿಂತು ಹಣ ತರುವ ಧಮ್ ಇಲ್ಲ ಎಂದರು.

ಕುಣಿಯಲು ಬಾರದವರು ನೆಲ ಡೊಂಕು ಅಂದರಂತೆ!

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಶಾಸಕರನ್ನು ಕರೆದು ಮಾತಾಡಿಸಲಿಲ್ಲ. ಅವರ ಕ್ಷೇತ್ರ ಗಳಿಗೆ ಅನುದಾನ ಬಿಡುಗಡೆ ‌ಮಾಡಲಿಲ್ಲ. ಐಷಾರಾಮಿ ಹೋಟೆಲ್ ನಲ್ಲಿ ಕುಳಿತು ಅಧಿಕಾರ ನಡೆಸಿದರು. ಹೀಗೆ ಮಾಡಿ ದ್ದರಿಂದ ಶಾಸಕರು ಸರ್ಕಾರ ಕೆಡವಿದರು. ಆದರೆ, ನಾನೇ ಸರ್ಕಾರ ‌ಕೆಡವಿದೆ ಎನ್ನುತ್ತಿದ್ದಾರೆ. ಕುಮಾರಸ್ವಾಮಿ ಅವರದು ಕುಣಿಯಲು ಬಾರದವರು ನೆಲ ಡೊಂಕು ಅಂದರಂತೆ ಎನ್ನುವ ಸ್ಥಿತಿಯಾಗಿದೆ ಎಂದು ವ್ಯಂಗ್ಯವಾಡಿದರು.