ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ರಮೇಶ ಕತ್ತಿ , ಉಪಾಧ್ಯಕ್ಷರಾಗಿ ಸುಭಾಷ ಢವಳೇಶ್ವರ ಅವಿರೋಧ ಆಯ್ಕೆ

0

ಜಿಲ್ಲೆಯಲ್ಲಿ ಇನ್ನು ಮುಂದೆ ಉಮೇಶ ಕತ್ತಿ, ರಮೇಶ ಜಾರಕಿಹೊಳಿ ಹಾಗೂ ಲಕ್ಷಣ ಸವದಿ ಅವರ ನೇತೃತ್ವದಲ್ಲಿ ಪಕ್ಷದ ಸಂಘಟನೆ ಮುನ್ನಡೆಸುತ್ತೇವೆ. ಯಾವುದೇ ಗೊಂದಲಗಳು ಅಥವಾ ಭಿನ್ನಾಭಿಪ್ರಾಯಗಳು ನಮ್ಮಲ್ಲಿ ಇಲ್ಲ. ಚರ್ಚೆಯನ್ನು ಭಿನ್ನಾಭಿಪ್ರಾಯ ಎಂದು ಪರಿಗಣಿಸಲಾಗದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯ ಹಂಚಿಕೊಳ್ಳಲು ಎಲ್ಲರಿಗೂ ಅವಕಾಶವಿದೆ – ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ

ಬೆಳಗಾವಿ, ನ. 14- ಕಳೆದ ಒಂದು ತಿಂಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ನಗರದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಖಚಿತವಾಗಿದೆ.

 

ಹಾಲಿ ಅಧ್ಯಕ್ಷ ರಮೇಶ ಕತ್ತಿ ಹಾಗೂ ಉಪಾಧ್ಯಕ್ಷ ಸುಭಾಷ ಢವಳೇಶ್ವರ ಅವರು ಮಾತ್ರವೇ ನಾಮಪತ್ರ ಸಲ್ಲಿಸಿದ್ದಾರೆ. ಅವರ ಆಯ್ಕೆ ಬಗ್ಗೆ ಅಧಿ ಕೃತ ಘೋಷಣೆಯಷ್ಟೇ ಬಾಕಿ ಇದೆ. ಮೂರು ಬಣಗಳಾಗಿ ಹೋಳಾಗಿದ್ದ ಜಿಲ್ಲೆಯ ಬಿಜೆಪಿ ಮುಖಂಡರು ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಒಮ್ಮತ ದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಇದರೊಂದಿಗೆ ಕುತೂಹಲಕ್ಕೆ ತೆರೆ ಬಿದ್ದಿದೆ.

 

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಬೆಳಿಗ್ಗೆಯಿಂದ ಅಂತಿಮ ಸುತ್ತಿನ ಸಭೆ ನಡೆಸಿದ ಬಿಜೆಪಿ ಮುಖಂಡರು,‌ ನಿರ್ದೇ ಶಕರ ಅಭಿಪ್ರಾಯಗಳ ನ್ನು ಆಲಿಸಿ ಅವಿರೋಧ ಆಯ್ಕೆಗೆ ನಿರ್ಧಾರ ಮಾಡಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿ ದರು.

 

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ‘ಪ್ರತಿಷ್ಠಿತ ಡಿಸಿಸಿ ಬ್ಯಾಂಕಿನ ಶತಮಾನೋತ್ಸವ ಆಚರಣೆ ಈ ವರ್ಷ ಬರಲಿದೆ. ಹೀಗಾಗಿ ಈ ಬಾರಿ ಚುನಾವಣೆ ಬೇಡ. ಎಲ್ಲರೂ ಸಮಾಲೋಚನೆ ನಡೆಸಿ ಒಮ್ಮತದ ನಿರ್ಣಯಕ್ಕೆ ಬರಬೇಕು ಎಂದು ವರಿಷ್ಠರು ಅಪೇಕ್ಷೆ ವ್ಯಕ್ತಪಡಿಸಿದ್ದರು. ಜೊತೆಗೆ 14 ಹಾಲಿ ನಿರ್ದೇಶಕರನ್ನು ಮುಂದುವರಿಸುವಂತೆಯೂ ಹೇಳಿದ್ದರು. ಅವರ ಮಾತು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದೇವೆ’ ಎಂದು ತಿಳಿಸಿದರು.

 

‘ಹಾಲಿ ಅಧ್ಯಕ್ಷ ರಮೇಶ ಕತ್ತಿ ಹಾಗೂ ಉಪಾಧ್ಯಕ್ಷ ಸುಭಾಷ ಢವಳೇಶ್ವರ ಅವರನ್ನೇ ಮುಂದುವರಿಸುತ್ತಿದ್ದೇವೆ. ಜಿಲ್ಲೆಯ ಪಕ್ಷದ ಎಲ್ಲ ಮುಖಂಡರೂ ರಾಜಕೀಯ ವ್ಯತ್ಯಾಸಗಳನ್ನು ಬದಿಗಿಟ್ಟು ಒಂದಾಗಿ ಹೋಗಬೇಕೆಂದು ನಿರ್ಧಾರ ಮಾಡಿದ್ದೇವೆ’ ಎಂದರು.

 

‘ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಆಯ್ಕೆಗೆ ಸಂಬಂಧಿಸಿದಂತೆ ತಿಂಗಳ ನಂತರ ಸಮಾಲೋಚನೆ ನಡೆಸುತ್ತೇವೆ. ಆ ಸ್ಥಾನಕ್ಕೂ ಸರ್ವಾನುಮತದಿಂದ ಆಯ್ಕೆ ಮಾಡುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಹಕಾರ ಕ್ಷೇತ್ರಕ್ಕೂ ಚುನಾವಣಾ ರಾಜಕಾರಣಕ್ಕೂ ಸಂಬಂಧವಿಲ್ಲ’ ಎಂದರು.

 

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ‘ಜಿಲ್ಲೆಯಲ್ಲಿ ಇನ್ನು ಮುಂದೆ ಉಮೇಶ ಕತ್ತಿ, ರಮೇಶ ಜಾರಕಿಹೊಳಿ ಹಾಗೂ ಲಕ್ಷಣ ಸವದಿ ಅವರ ಪಕ್ಷದ ಸಂಘಟನೆಯನ್ನು ಮುನ್ನಡೆಸುತ್ತೇವೆ. ಯಾವುದೇ ಗೊಂದಲಗಳು ಅಥವಾ ಭಿನ್ನಾಭಿಪ್ರಾಯಗಳು ನಮ್ಮಲ್ಲಿ ಇಲ್ಲ. ಚರ್ಚೆ ಯನ್ನು ಭಿನ್ನಾಭಿಪ್ರಾಯ ಎಂದು ಪರಿಗಣಿಸಲಾಗದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯ ಹಂಚಿಕೊಳ್ಳಲು ಎಲ್ಲರಿಗೂ ಅವಕಾಶವಿದೆ ಎಂದರು.

 

ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಬ್ಯಾಂಕಿನ ನೌಕರರು, ರೈತರು ಹಾಗೂ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಹೋಗುವಂತೆ ತಿಳಿಸಿದ್ದೇವೆ’ ಎಂದರು. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಶಾಸಕರಾದ ಉಮೇಶ ಕತ್ತಿ, ಮಹಾಂತೇಶ ದೊಡ್ಡಗೌಡರ ಹಾಗೂ ನಿರ್ದೇಶಕರು ಇದ್ದರು.///