ನಾಳೆಯಿಂದ ಕಾಲೇಜು ಪುನರಾರಂಭ

0

ಬೆಂಗಳೂರು, ನ 16 – ಪದವಿ, ಎಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಕಾಲೇಜುಗಳ ತರಗತಿ ಇದೇ 17ರಿಂದ ಆರಂಭಗೊಳ್ಳಲಿದ್ದು, ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ನೇರ ತರಗತಿಗಳು ನಡೆಯಲಿವೆ.

ಕಾಲೇಜುಗಳನ್ನು ತೆರೆಯಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮಾರ್ಗಸೂಚಿ ಹೊರಡಿಸಿದ್ದು, ಅದರಂತೆ ಕಾಲೇಜುಗಳನ್ನು ಪುನರಾರಂಭಿಸಲು ಉನ್ನತ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಉಳಿದ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳನ್ನು ನಡೆಸಲಾಗುತ್ತದೆ. ನೇರ ತರಗತಿಗೆ ಅಂದರೆ, ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರ ನೀಡಬೇಕು. ಬೋಧಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಮೂರು ದಿನ ಮೊದಲುಕೋವಿಡ್ ಪರೀಕ್ಷೆ ಮಾಡಿಕೊಂಡು, ನೆಗೆಟಿವ್‌ ಇದ್ದಲ್ಲಿ ಮಾತ್ರ ಹಾಜರಾಗಲು ಅವಕಾಶ ನೀಡಬೇಕು ಎಂದು ಸಂಬಂಧಪಟ್ಟ ಪ್ರಾಚಾರ್ಯರಿಗೆ ಸೂಚನೆ ನೀಡಲಾಗಿದೆ.

ಕಾಲೇಜಿನ ಕಟ್ಟಡ, ಶೌಚಾಲಯ, ಎಲ್ಲ ಕೊಠಡಿಗಳಲ್ಲಿನ ಪೀಠೋಪಕರಣ ಮತ್ತು ಪಠ್ಯ ಸಾಮಗ್ರಿಗಳನ್ನು ಸ್ಯಾನಿಟೈಸ್ ಮಾಡಬೇಕು ಎಂದೂ ಸೂಚಿಸಲಾಗಿದೆ. 8 ತಿಂಗಳು ಬಳಿಕ ರಾಜ್ಯದಲ್ಲಿ ಕಾಲೇಜು ಓಪನ್ ಆಗುತ್ತಿದ್ದು, ಇದು ಕಾಲೇಜು ಶಿಕ್ಷಕ ವರ್ಗ ಮತ್ತು ವಿದ್ಯಾರ್ಥಿಗಳಲ್ಲಿ ಎಲ್ಲಿಲ್ಲದ ಹರ್ಷ ಮೂಡಿಸಿದೆ.