ನಿವೃತ್ತ ನೌಕರರೊಬ್ಬರು ಪೊಲೀಸ್‌ ಇನ್ಸ್‌ಪೆಕ್ಟರ್‌ ವಿರುದ್ಧ ಅವರದೇ ಠಾಣೆಯಲ್ಲಿ ದೂರು

0

ಹುಬ್ಬಳ್ಳಿ: ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಿತ್ತುಕೊಂಡ ಪ್ರಕರಣಕ್ಕೆ ಸಂಬಂಧಿಸಿ ನಿವೃತ್ತ ನೌಕರರೊಬ್ಬರು ಪೊಲೀಸ್‌ ಇನ್ಸ್‌ಪೆಕ್ಟರ್‌ ವಿರುದ್ಧ ಅವರದೇ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಿವೃತ್ತ ನೌಕರ ಓಂಕಾರಗೌಡ ಪಾಟೀಲ ಅವರು ನವನಗರ ಠಾಣೆ ಇನ್ಸ್‌ಪೆಕ್ಟರ್‌ ಪ್ರಭು ಸೂರಿನ ವಿರುದ್ಧ ನವನಗರ ಠಾಣೆಯಲ್ಲೇ ದೂರು ದಾಖಲಿಸಿದ್ದಾರೆ.

ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಓಂಕಾರಗೌಡರ ಸೊಸೆ ಶಿವಲೀಲಾ ಪಾಟೀಲ ಹಾಗೂ ಸಂತೋಷಕುಮಾರ ಗುಡ್ಡಾಪುರಮಠ ಎನ್ನುವವರೊಂದಿಗೆ ಸೇರಿ ನವನಗರ ಠಾಣೆ ಇನ್ಸ್‌ಪೆಕ್ಟರ್‌ ಪ್ರಭು ಸೂರಿನ ಅವರು ತಮಗೆ ಜೀವ ಬೆದರಿಕೆ ಹಾಕಿ 1 ಕೋಟಿ ರೂ. ಮೌಲ್ಯದ 2ಕೆಜಿ ಚಿನ್ನಾಭರಣ ಕಿತ್ತುಕೊಂಡಿದ್ದಾರೆಂದು ಆರೋಪಿಸಿ ಓಂಕಾರಗೌಡ ಅವರು ನವನಗರ ಠಾಣೆ ಇನ್ಸ್‌ಪೆಕ್ಟರ್‌ ಸೇರಿ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಶಿವಲೀಲಾ ಮತ್ತು ಸಂತೋಷಕುಮಾರ ಚಿನ್ನಾಭರಣ ಕಿತ್ತುಕೊಂಡ ಬಗ್ಗೆ ಓಂಕಾರಗೌಡ ಅವರು ಎಪಿಎಂಸಿ-ನವನಗರ ಠಾಣೆಗೆ ದೂರು ಸಲ್ಲಿಸಲು ಹಲವಾರು ಬಾರಿ ಅಲೆದಾಡಿದರೂ ದೂರು ದಾಖಲಿಸಿಕೊಂಡಿರಲಿಲ್ಲ.

ಹೀಗಾಗಿ ಓಂಕಾರಗೌಡರು 3ನೇಹಿರಿಯ ದಿವಾಣಿ ನ್ಯಾಯಾಲಯ ಮತ್ತು ಜೆಎಂಎಫ್‌ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಇದನ್ನು ಆಧರಿಸಿ ನ್ಯಾಯಾಲಯವು ಎಪಿಎಂಸಿ – ನವನಗರ ಠಾಣೆಗೆ ದೂರು ದಾಖಲಿಸಿಕೊಳ್ಳುವಂತೆ ನಿರ್ದೇಶಿಸಿದ್ದರಿಂದ ಠಾಣೆಯ ಇನ್ಸ್‌ಪೆಕ್ಟರ್‌ ಪ್ರಭುಸೂರಿನ ಸೇರಿ ಮೂವರ ವಿರುದ್ಧ ನ. 13ರಂದು ಓಂಕಾರಗೌಡ ದೂರು ದಾಖಲಿಸಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ನಡೆದಿದೆ.