ಶಾಲೆಗಳನ್ನು ಪುನರಾರಂಭಿಸುವ ಕುರಿತು ರಾಜ್ಯ ಸರ್ಕಾರ ಸೋಮವಾರ ಅಂತಿಮ ನಿರ್ಧಾರ

0

ಬೆಂಗಳೂರು, ನ. 22- ರಾಜ್ಯದಲ್ಲಿ ಶಾಲೆಗಳನ್ನು ಪುನರಾರಂಭಿಸುವ ಕುರಿತು ರಾಜ್ಯ ಸರ್ಕಾರ ಸೋಮವಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಸಭೆ ನಡೆಯಲಿದ್ದು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಮತ್ತು ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಶಾಲೆಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸಿದ್ಧಪಡಿಸಿದ ವರದಿಯನ್ನು ಸಚಿವರು, ಮುಖ್ಯ ಮಂತ್ರಿಯವರ ಮುಂದಿಡುವರು. ಪೋಷಕರು, ವಿದ್ಯಾರ್ಥಿಗಳು, ಶಾಲಾ ಆಡಳಿತ ಮಂಡಳಿಗಳು, ಶಿಕ್ಷಕರು ನೀಡಿದ ಅಭಿಪ್ರಾಯಗಳು ಈ ವರದಿಯಲ್ಲಿವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಇಲಾಖೆಯ ಆಯುಕ್ತ ಅನ್ಬುಕುಮಾರ್‌, ಡಿಸೆಂಬರ್‌ ಎರಡನೇ ವಾರದಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಾಲಾ–ಕಾಲೇಜು ಪ್ರಾರಂಭಿಸಬಹುದು ಎಂದು ನ. 9 ರಂದು ಶಿಫಾರಸು ಮಾಡಿದ್ದರು. ಈ ಕಾರಣಕ್ಕೆ ಸೋಮವಾರ ಸಭೆ ನಡೆಸಿ ಸಿಎಂ ಸಮ್ಮುಖದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇಲಾಖೆ ಮೂಲಗಳು ನ್ಯೂಜ್ ೪ ಯು ಸುದ್ದಿವಾಹಿನಿಗೆ ತಿಳಿಸಿವೆ.