ಅರಣ್ಯ ಅಧಿಕಾರಿಗಳು ಹಾಗೂ ಅರಣ್ಯ ರಕ್ಷಕರಿಗೆ ಗೌರವ ಪದಕ ವಿತರಣೆ

0
ಬೆಂಗಳೂರು: ಅರಣ್ಯ ಅಧಿಕಾರಿಗಳು ಹಾಗೂ ಅರಣ್ಯ ರಕ್ಷಕರಿಗೆ ಮುಖ್ಯಮಂತ್ರಿಯಿಂದ ಗೌರವ ಪದಕ ವಿತರಣಾ ಕಾರ್ಯಕ್ರಮ ವಿಧಾನಸೌಧದಲ್ಲಿ ಸೋಮವಾರ ನಡೆಯಿತು. ಕಾರ್ಯಕ್ರಮದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಭಾಗಿಯಾಗಿ ಅರಣ್ಯ ಅಧಿಕಾರಿಗಳು ಹಾಗೂ ಅರಣ್ಯ ರಕ್ಷಕರಿಗೆ ಗೌರವ ಪದಕ ವಿತರಣೆ ಮಾಡಿದರು.
‘ಅರಣ್ಯ ಜೀವ ಜಲದ ಆಗರ. ಈ ನೈಸರ್ಗಿಕ ಸಂಪತ್ತನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಪಶ್ಚಿಮಘಟ್ಟಗಳ ಬಹುಭಾಗ ನಮ್ಮ ರಾಜ್ಯದಲ್ಲಿ ಇದೆ. ವನ್ಯಜೀವಿ ಸಂರಕ್ಷಣೆಯಲ್ಲಿ ರಾಜ್ಯ ಅಗ್ರ ಸ್ಥಾನದಲ್ಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಗಣನೀಯ ಸಾಧನೆ ಮಾಡಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ ಮಾಡಿದ ಬಳಿಕ ಅವರು ಮಾತನಾಡಿದರು.
ಒತ್ತಡಗಳನ್ನು ಮೀರಿ ಅರಣ್ಯ ಸಂರಕ್ಷಣೆಗೆ ಅರಣ್ಯ ಇಲಾಖೆ ಶ್ರಮ ವಹಿಸುತ್ತಿದೆ. ಇವರ ಪರಿಶ್ರಮದಿಂದ ಕರ್ನಾಟಕಕ್ಕೆ ಉತ್ತಮ ಹೆಸರಿದೆ. ಪದಕ ಪಡೆದವರು ಮುಂದಿನ ದಿನಗಳಲ್ಲಿ ಅರಣ್ಯ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಉತ್ತರ ಕರ್ನಾಟಕದಲ್ಲೂ ಹಸಿರು ವಾತಾವರಣ ಇದೆ. ಅರಣ್ಯ, ಪರಿಸರ ಉತ್ತಮವಾಗಿದ್ದರೆ ಜಗತ್ತು ಉಳಿಯುತ್ತದೆ’ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದರು. ‘ಅರಣ್ಯ ಉಳಿಸಲು ಶ್ರಮಿಸಿದವರಿಗೆ ಗೌರವ ಸಲ್ಲಿಸಲಾಗಿದೆ. ಪೊಲೀಸ್ ಇಲಾಖೆಗೆ ಹೋಲಿಸಿದರೆ ಅರಣ್ಯ ಇಲಾಖೆಯಲ್ಲಿ ಸೌಲಭ್ಯಗಳು ಕಡಿಮೆ. ಮುಂದಿನ ದಿನಗಳಲ್ಲಿ ಈ ತಾರತಮ್ಯ ಸರಿಪಡಿಸಲು ಕ್ರಮ ವಹಿಸಲಾಗುವುದು’ ಎಂದೂ ಅವರು ಹೇಳಿದರು.
ಇದೇ ವೇಳೆ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಪೊಲೀಸ್ ಇಲಾಖೆಗೆ ಸಿಗುವ ಸೌಲಭ್ಯ ನೀಡುವಂತೆ ಸಿಎಂ ಬಿಎಸ್‌ವೈ ಅವರಲ್ಲಿ ಆನಂದ್ ಸಿಂಗ್ ಮನವಿ ಮಾಡಿದರು. ಅರಣ್ಯ ಇಲಾಖೆ ಅಧಿಕಾರಿಗಳ ಸಾಧನೆ ಗುರುತಿಸಿ ಮೊದಲ ಬಾರಿಗೆ ವಿತರಿಸಲಾಗುತ್ತಿರುವ ಮುಖ್ಯಮಂತ್ರಿ ಪದಕಕ್ಕೆ ಬೆಳಗಾವಿಯ ಮೂವರು ಅರಣ್ಯ ಇಲಾಖೆಯ ಅಧಿಕಾರಿಗಳು ಭಾಜನರಾಗಿದ್ದಾರೆ.
ಸವದತ್ತಿ ವಲಯ ಅರಣ್ಯ ಅಧಿಕಾರಿ ಸುನೀತಾ ನಿಂಬರಗಿ (ನಾಗಲೋಟಿಮಠ) ಅವರು ಶೌರ್ಯ ಮತ್ತು ದಿಟ್ಟತನ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.
ಕಾರ್ಯ ಯೋಜನೆ ವಿಭಾಗದಲ್ಲಿ ವಲಯ ಅರಣ್ಯ ಅಧಿಕಾರಿ ಅಪ್ಪೋಜಿ ವೈ. ಪಾಟೀಲ ಮತ್ತು ಸಹಾಯಕ ವಲಹ ಅರಣ್ಯ ಅಧಿಕಾರಿ ಗುರುನಾಥ ಬಾಯನ್ನವರ ಪದಕ ಪಡೆದಿದ್ದಾರೆ.