ಸಂಪುಟ ವಿಸ್ತರಣೆ ಇನ್ನಷ್ಟು ವಿಳಂಬ ಸಾಧ್ಯತೆ..?

0

ಬೆಂಗಳೂರು, ನ. 23- ಮೂರು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠರು ಅನುಮತಿ ನೀಡಲಿದ್ದಾರೆ. ಒಪ್ಪಿಗೆ ಸಿಕ್ಕಿದ ತಕ್ಷಣವೇ ವಿಸ್ತರಣೆ ಮಾಡುತ್ತೇನೆ’ ಎಂಬ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿಶ್ವಾಸದ ಮಾತು ಈಗ ಹುಸಿಯಾಗಿದೆ.

ವರಿಷ್ಠರು ಹಸಿರು ನಿಶಾನೆ ನೀಡುವ ಲಕ್ಷಣಗಳೂ ಕಂಡು ಬಂದಿಲ್ಲ. ಡಿಸೆಂಬರ್‌ ಕೊನೆಯವರೆಗೂ ವಿಸ್ತರಣೆ ಅಥವಾ ಪುನರ್‌ರಚನೆಯ ಸಾಧ್ಯತೆ ಕಡಿಮೆ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವರಿಷ್ಠರ ಜತೆಗೆ ಮಾತುಕತೆಗಾಗಿ ಶನಿವಾರ ದಿಢೀರ್‌ ದೆಹಲಿಗೆ ತೆರಳಿದ್ದರು ಎಂಬ ವದಂತಿ ರಾಜಕೀಯ ವಲಯದಲ್ಲಿ ದಟ್ಟವಾಗಿ ಹರಡಿತ್ತು. ದೆಹಲಿಯ ಭೇಟಿಯ ಬಗ್ಗೆ ಅವರ ಆಪ್ತ ಮೂಲಗಳು ಮೌನವಹಿಸಿರುವುದು ಚರ್ಚೆಗೆ ಕಾರಣವಾಗಿದೆ.

ಡಿ. 7 ರಿಂದ 15ರವರೆಗೆ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದೆ. ಆ ನಂತರ ಈ ಬಗ್ಗೆ ಯೋಚಿ ಸೋಣ ಎಂದು ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರಿಗೆ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ. ನ. 18 ರಂದು ದೆಹಲಿಗೆ ಹೋಗಿ ಬಂದಿದ್ದ ಮುಖ್ಯಮಂತ್ರಿ, 3–4 ದಿನಗಳಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ. ವರಿಷ್ಠರು ಅನುಮತಿ ನೀಡಲಿದ್ದಾರೆ ಎಂದಿದ್ದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣಕಾಚಾರ್ಯ, ಸಚಿವ ವಿ. ಸೋಮಣ್ಣ, ಬಿ.ವೈ. ವಿಜಯೇಂದ್ರ ಅವರು ಮುಖ್ಯಮಂತ್ರಿಯ ಕಾವೇರಿ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಮಾತುಕತೆ ನಡೆಸಿದರು.

ಮುಖ್ಯಮಂತ್ರಿ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರೇಣುಕಾಚಾರ್ಯ, ‘ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡುವುದು ಮುಖ್ಯಮಂತ್ರಿ ಮತ್ತು ವರಿಷ್ಠರಿಗೆ ಬಿಟ್ಟಿದ್ದು. ಕೆಲವು ಸಚಿವರನ್ನು ಕೈಬಿಡುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮಾತನಾಡಿದ್ದೇನೆ. ಆ ವಿಷಯದ ಬಗ್ಗೆ ಹಾದಿಬೀದಿಯಲ್ಲಿ ಚರ್ಚೆ ಮಾಡುವುದಿಲ್ಲ’ ಎಂದರು.

‘ಶಾಸಕರ ಭಾವನೆಗಳನ್ನು ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಯ ಗಮನಕ್ಕೆ ತಂದಿದ್ದೇನೆ. ದೆಹಲಿಗೆ ಹೋಗಿದ್ದಾಗ ಬಿ.ಎಲ್. ಸಂತೋಷ್ ಅವರ ಗಮನಕ್ಕೂ ತಂದಿದ್ದೇನೆ. ಎಲ್ಲವನ್ನೂ ತೀರ್ಮಾನಿಸುವುದು ಮುಖ್ಯಮಂತ್ರಿ ಮತ್ತು ಹೈಕಮಾಂಡ್. ಯಾವಾಗ ಸಂಪುಟ ವಿಸ್ತರಣೆ ಆಗಲಿದೆ ಎಂಬುದು ಗೊತ್ತಿಲ್ಲ’ ಎಂದರು.

ಮುಂಬರುವ ದಿನಗಳಲ್ಲಿ ಉಪಚುನಾವಣೆ ನಡೆಯಲಿರುವ ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳ ಸ್ಥಿತಿಗತಿಯ ಬಗ್ಗೆ ಎರಡೂ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಬಂದಿರುವ ಬಿ.ವೈ.ವಿಜಯೇಂದ್ರ ಅವರು ತಮ್ಮ ತಂದೆಗೆ ಮಾಹಿತಿ ನೀಡಿದರು ಎಂದು ಮೂಲಗಳು ಹೇಳಿವೆ.