ಮೆಗಾ ಲೋಕ ಅದಾಲತ್‍ನ ಸಾರ್ವಜನಿಕರು ಲಾಭ ಪಡೆದುಕೊಳ್ಳಬೇಕು: ನ್ಯಾಯಾಧೀಶ ಸಿಂ.ಎಂ.ಜೋಶಿ

0

ಬೆಳಗಾವಿ, ನ.23 : ವ್ಯಾಜ್ಯವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಹಾಗೂ ಶೀಘ್ರದಲ್ಲಿ ಇತ್ಯರ್ಥಪಡಿಸಿಕೊಳ್ಳಲು ಅನುಕೂಲವಾಗುವಂತೆ ಡಿಸೆಂಬರ್ 19 ರಂದು ಮೆಗಾ ಲೋಕ ಅದಾಲತ್‍ವನ್ನು ಜಿಲ್ಲೆಯ ಎಲ್ಲ ನ್ಯಾಯಾಲಯಗಳ ಸಂಕೀರ್ಣಗಳಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಸಿ.ಎಂ.ಜೋಶಿ ಅವರು ತಿಳಿಸಿದರು.
ಸೋಮವಾರ (ನ.23) ರಂದು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮೆಗಾಲೋಕ ಅದಾಲತ್‍ನ ಬಗ್ಗೆ ಅವರು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಳಗಾವಿ ತಾಲೂಕಾ ಕಾನೂನು ಸೇವಾ ಸಮಿತಿಗಳು ಅಥಣಿ, ಬೈಲಹೊಂಗಲ, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ನಿಪ್ಪಾಣಿ, ಸೌದತ್ತಿ, ಸಂಕೇಶ್ವರ, ರಾಯಬಾಗ, ರಾಮದುರ್ಗ ಮತ್ತು ಖಾನಾಪೂರಗಳ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 19 ರಂದು ಬೆಳಗಾವಿ ಜಿಲ್ಲೆಯ ಹಾಗೂ ಎಲ್ಲ ನ್ಯಾಯಾಲಯಗಳ ಸಂಕೀರ್ಣದಲ್ಲಿ ಮೆಗಾ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಎಂದು ಅವರು ತಿಳಿಸಿದರು.
ಲೋಕ ಅದಾಲತ್ ಎಂದರೆ ಯಾವುದೇ ಒಂದು ಪ್ರಕರಣದ ಉಭಯ ಪಕ್ಷಗಾರರಲ್ಲಿ ರಾಜಿ ಸಂಧಾನ ಏರ್ಪಡಿಸುವ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಲೋಕ ಅದಾಲತ್‍ನ ವೈಶಿಷ್ಟ್ಯಗಳೆಂದರೆ:
ವ್ಯಾಜ್ಯವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಬಹುದು, ಯಾವುದೇ ಕೋರ್ಟ ಫೀಸ್ ಕೊಡಬೇಕಾಗಿಲ್ಲ, ಪಕ್ಷಗಾರರು ನೇರವಾಗಿ ಭಾಗವಹಿಸಬಹುದು, ಸಂಧಾನಕಾರರು ಸೂಚಿಸುವ ಪರಿಹಾರ ತೃಪ್ತಿಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು, ಅದೇ ರೀತಿ ಸಿವಿಲ್ ಪ್ರಕರಣ ಇತ್ಯರ್ಥಗೊಂಡರೆ ಆವಾರ್ಡ ಮಾಡಲಾಗುವುದು ಅದು ಸಾಮಾನ್ಯ ಡಿಕ್ರಿಯಷ್ಟೆ ಮಹತ್ವ ಪಡೆದುಕೊಂಡಿರುತ್ತದೆ ಎಂದು ತಿಳಿಸಿದರು.
ಪ್ರಕರಣ ರಾಜಿಯಾದಲ್ಲಿ ಶೇ 100% ರಷ್ಟು ನ್ಯಾಯಾಲಯ ಶುಲ್ಕ ಹಿಂದಿರುಗಿಸಲಾಗುವುದು, ಹಾಗೂ ಲೋಕ ಅದಾಲತ್ ಅವಾರ್ಡ ವಿರುದ್ಧ ಮೇಲ್ಮನವಿಗೆ ಅವಕಾಶವಿರುವುದಿಲ್ಲ.
ಮೆಗಾ ಲೋಕ ಅದಾಲತ್‍ನಲ್ಲಿ ತೆಗೆದುಕೊಳ್ಳುವ ಪ್ರಕರಣಗಳೆಂದರೆ ವ್ಯಾಜ್ಯಪೂರ್ವ ಪ್ರಕರಣಗಳು ಸಮತ್ತು ನ್ಯಾಯಾಲಯಗಳಲ್ಲಿ ವಿಚಾರಣೆಗಾಗಿ ಬಾಕಿ ಇರುವ ಪ್ರಕರಣಗಳಾಗಿ ವಿಂಗಡಿಸಲಾಗಿದೆ ಎಂದು ತಿಳಿಸಿದರು.

ವ್ಯಾಜ್ಯಪೂರ್ವ ಪ್ರಕರಣಗಳು:
ಚೆಕ್ ಬೌನ್ಸ್ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಕಾರ್ಮಿಕ ವಿವಾದಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳ ಪ್ರಕರಣಗಳು (ರಾಜಿ ಮಾಡಿಕೊಳ್ಳಲು ಬರಲಾರದ ಪ್ರಕರಣಗಳನ್ನು ಹೊರತುಪಡಿಸಿ) ಇತರೆ ಪ್ರಕರಣಗಳು (ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳು, ವೈವಾಹಿಕ ಮತ್ತು ಇತರ ಸಿವಿಲ್ ವ್ಯಾಜ್ಯಗಳು) ಎಂದು ಹೇಳಿದರು.

ನ್ಯಾಯಾಲಯಗಳಲ್ಲಿ ವಿಚಾರಣೆಗಾಗಿ ಬಾಕಿ ಇರುವ ಪ್ರಕರಣಗಳು:
ಕ್ರಿಮಿನಲ್ ರಾಜಿಯಾಗಬಹುದಾದ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು ಬ್ಯಾಂಕ್ ವಸೂಲಾತಿ ಪ್ರಕರಣಗಳು, ಕಾರ್ಮಿಕ ವಿವಾದ ಪ್ರಕರಣಗಳು, ಎಮ್.ಎ.ಸಿ. ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳ ಪ್ರಕರಣಗಳು, (ರಾಜಿ ಮಾಡಿಕೊಳ್ಳು ಬರಲಾರದ ಪ್ರಕರಣಗಳನ್ನು ಹೊರತುಪಡಿಸಿ) ಎಲ್.ಎ,ಸಿ ಪ್ರಕರಣಗಳು, ಕಂದಾಯ ಪ್ರಕರಣಗಳು ಹಾಗೂ ಇತರೆ ಸಿವಿಲ್ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬಹುದೆಂದು ತಿಳಿಸಿದರು.

ಮೆಗಾ ಲೋಕ ಅದಾಲತನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡಲು ಪ್ರತಿದಿನ 4 ಗಂಟೆಗೆ (ರಜಾ ದಿನಗಳನ್ನು ಹೊರತುಪಡಿಸಿ) ಎ.ಡಿ.ಆರ್, ಬಿಲ್ಡಿಂಗ್ ಬೆಳಗಾವಿ ಹಾಗೂ ತಾಲೂಕಿನ ಎಲ್ಲಾ ನ್ಯಾಯಾಲಯಗಳಲ್ಲಿ ಪ್ರಿ ಕನ್ಸಿಲೆಷನ್ ಬೈಠಕ್ ಮೂಲಕ ಏರ್ಪಡಿಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು, ಕಕ್ಷಿಗಾರರು, ವಕೀಲರು, ಬ್ಯಾಂಕ್ ಗ್ರಾಹಕರು ಮತ್ತು ಅಧಿಕಾರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿ ಮೆಗಾ ಲೋಕ ಅದಾಲತ್‍ನ ಲಾಭ ಪಡೆದುಕೊಳ್ಳುವಂತೆ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಸಿ.ಎಂ ಜೋಶಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಜಯ ದೇವರಾಜ ಅರಸ ಹಾಗೂ ಕಾನೂನು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0831-2423216 ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಬಹುದಾಗಿದೆ.