ಸರ್ಕಾರಿ ಪಾಲಿಟೆಕ್ನಿಕ್ ಸಾಧನೆ: ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಮೆಚ್ಚುಗೆ

0

 

ಬೆಳಗಾವಿ, ನ.24 : ಕೋವಿಡ್-19 ಸಂದರ್ಭದಲ್ಲಿಯೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶೇ.100ಕ್ಕೆ ನೂರರಷ್ಟು ಪ್ರವೇಶ ಮತ್ತು ಹಲವು ವರ್ಷಗಳಿಂದ ಉತ್ತಮ ಫಲಿತಾಂಶ ಗಳಿಸುತ್ತಿರುವ ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಾಧನೆಯ ಬಗ್ಗೆ ಉಪ ಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರಾದ ಡಾ.ಅಶ್ವಥ್ ನಾರಾಯಣ ಸಿ.ಎನ್. ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಮಂಗಳವಾರ (ನ.24) ಭೇಟಿ ನೀಡಿದ ಅವರು, ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಜತೆ ಚರ್ಚೆ ನಡೆಸಿದರು. ಪ್ರತಿವರ್ಷ ಅತ್ಯುತ್ತಮ ಫಲಿತಾಂಶ ಗಳಿಸುತ್ತಿರುವ ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ(ಪ್ಲೇಸಮೆಂಟ್) ಕಲ್ಪಿಸುವಲ್ಲಿಯೂ ಉತ್ತಮ ಸಾಧನೆಗೈದಿದೆ ಎಂದು ಸಂತಸ ವ್ಯಕ್ತಪಡಿಸಿದರು.

 

ಕಟ್ಟಡ ನವೀಕರಣ-ಪ್ರಸ್ತಾವ ಸಲ್ಲಿಕೆಗೆ ಸೂಚನೆ:

ಬೆಳಗಾವಿಯಲ್ಲಿ ನಿರಂತರ ಮಳೆ ಹಾಗೂ ತಂಪು ವಾತಾವರಣದಿಂದ ಕಳೆಗುಂದಿರುವ ಕಾಲೇಜು ಕಟ್ಟಡ ನವೀಕರಣ ಹಾಗೂ ಕ್ಯಾಂಟೀನ್ ನಿರ್ಮಾಣದ ಅಗತ್ಯವಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಸ್ತಾವ ಸಲ್ಲಿಸಿದೆ ಎಂದು ಐಟಿಐ ಪ್ರಾಚಾರ್ಯ ವೈ.ಎನ್.ದೊಡ್ಡಮನಿ ಸಚಿವರ ಗಮನಕ್ಕೆ ತಂದರು.

ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸಚಿವ ಡಾ.ಅಶ್ವಥ್ ನಾರಾಯಣ ಅವರು, ಸ್ಥಳೀಯ ಶಾಸಕರಾದ ಅನಿಲ್ ಬೆನಕೆ ಅವರ ಜತೆ ಸಮಗ್ರವಾಗಿ ಚರ್ಚಿಸಿದ ಬಳಿಕ ನವೀಕರಣಕ್ಕೆ ಪ್ರಸ್ತಾವ ಕಳಿಸುವಂತೆ ಸೂಚನೆ ನೀಡಿದರು.

ಇದಾದ ಬಳಿಕ ಮಹಿಳಾ ಸರಕಾರಿ ಪದವಿ ಕಾಲೇಜಿಗೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ.ಬಸವರಾಜ ಪದ್ಮಶಾಲಿ, ಐಟಿಐ ಪ್ರಾಚಾರ್ಯ ವೈ.ಎನ್.ದೊಡ್ಡಮನಿ, ಉಭಯ ಕಾಲೇಜುಗಳ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.