ಕುರಬರಿಗೆ ಎಸ್ಟಿ ಸ್ಟೇಟಸ್, ಸಚಿವ ಈಶ್ವರಪ್ಪ ರಾಜೀನಾಮೆ ಕೊಡಲಿ!:ಅರವಿಂದ ದಳವಾಯಿ…

0

ಕುರಬರಿಗೆ ಎಸ್ಟಿ ಸ್ಟೇಟಸ್, ಸಚಿವ ಈಶ್ವರಪ್ಪ ರಾಜೀನಾಮೆ ಕೊಡಲಿ!:ಅರವಿಂದ ದಳವಾಯಿ..

ಬೆಳಗಾವಿ:ರಾಜ್ಯದಲ್ಲಿ ಬೇರೆ ಬೇರೆ ಸಮಾಜಗಳು ತಮ್ಮ ತಮ್ಮ ಮೀಸಲಾತಿಗೆ ಹೋರಾಡುತ್ತಿವೆ ಆದರೆ ಕುರುಬ ಸಮಾಜದ ಸಚಿವ ಕೆ. ಎಸ್. ಈಶ್ವರಪ್ಪ ಹಾಗೂ ಬಿಜೆಪಿ ಕ್ಯಾಬಿನೆಟ್ ನ ಇತರ ಹಿರಿಯ ನಾಯಕರು ಯಾಕೆ ಕುರುಬರನ್ನು ಎಸ್ಟಿಗೆ ಸೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಕುರುಬರ ಮುಖಂಡ, ಮಾಜಿ ಕೆಎಎಸ್ ಅಧಿಕಾರಿ ಹಾಗೂ ಸಂಗೊಳ್ಳಿ ರಾಯಣ್ಣ ಸ್ಮಾರಕ ಪ್ರಾಧಿಕಾರ ಹೋರಾಟ ಸಮಿತಿ ಅಧ್ಯಕ್ಷ ಅರವಿಂದ ದಳವಾಯಿ ತರಾಟೆಗೆ ತೆಗೆದುಕೊಂಡರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರಕಾರದಲ್ಲಿರುವ ರಾಜ್ಯಮಟ್ಟದ ಪ್ರಮುಖ ಕುರುಬ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ಇತ್ತೀಚೆಗೆ ಕುರುಬರಿಗೆ ಎಸ್ಟಿ ಮೀಸಲಾತಿಗೆ ಆಗ್ರಹಿಸಿ ಸ್ವರ ಎತ್ತಲಾಗುತ್ತಿದೆ, ಇದು ಬರಿ ನಾಟಕವಾಗುತ್ತಿದೆ ಹೊರತು, ನಿಜವಾಗಿಯೂ ಕುರುಬರನ್ನು ಎಸ್ಟಿಗೆ ಸೇರಿಸುವ ಆಡಳಿತಾತ್ಮಕ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಸಚಿವ ಕೆ. ಎಸ್. ಈಶ್ವರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

ಪ್ರಧಾನಿ ನರೇಂದ್ರ ಮೋದಿ, ಸಂಬಂಧಿಸಿದ ಕೇಂದ್ರ ಕಾರ್ಯದರ್ಶಿ ಹಾಗೂ ಕೇಂದ್ರ ಸಚಿವರಿಗೆ ಭೇಟಿ ಮಾಡಿ ಸೂಕ್ತ ಸರಕಾರಿ ನಿಯಮಾವಳಿ ಮಾರ್ಗದ ಮೂಲಕ ಕುರುಬರಿಗೆ ಎಸ್ಟಿ ಸ್ಟೇಟಸ್ ಕೊಡಿಸುವ ಒತ್ತಡ ಕೇಂದ್ರ ಸರಕಾರಕ್ಕೆ ಹಾಕಬೇಕಿತ್ತು ಎಂದು ಒತ್ತಾಯಿಸಿದರು.

ಕೆ. ಎಸ್. ಈಶ್ವರಪ್ಪ, ಎಚ್. ಎಂ. ರೇವಣ್ಣ, ಎಂ. ಟಿ. ಬಿ.‌ನಾಗರಾಜ, ಅಡಗೂರು ಎಚ್. ವಿಶ್ವನಾಥ, ಆರ್. ಶಂಕರ ಮತ್ತಿತರ ನಾಯಕರು ತಮ್ಮಲ್ಲಿ ಇರುವ ಅಧಿಕಾರ ಉಪಯೋಗಿಸಿ ಕೇಂದ್ರ ಮತ್ತು ರಾಜ್ಯದಲ್ಲಿ ಪಾಸ್ ಮಾಡಿಸಬಹುದಲ್ಲ ಎಂದು ಅರವಿಂದ ದಳವಾಯಿ ತರಾಟೆಗೆ ತೆಗೆದುಕೊಂಡರು.

ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರಕಾರ ಇರುವಾಗ ಬೀದಿ ಹೋರಾಟದ ಅಗತ್ಯ ಏನಿದೆ ಎಂದು ಪ್ರಶ್ನಿಸಿರುವ ಅರವಿಂದ ದಳವಾಯಿ
ನ. ೨೯ ರಂದು ಬಾಗಲಕೋಟೆಯಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಸರಕಾರದಲ್ಲಿರುವ ಕುರುಬ ನಾಯಕರು, ಸಚಿವರು, ಶಾಸಕರು ಎಸ್ಟಿಗೆ ಸೇರಿಸುವ ಒತ್ತಡ ಕೇಂದ್ರ ಸರಕಾರಕ್ಕೆ ಹಾಕಿ ರಾಜೀನಾಮೆ ಕೊಡಬೇಕು ಎಂದು ಅರವಿಂದ ದಳವಾಯಿ ಆಗ್ರಹಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹೋರಾಟದ ಹಿನ್ನೆಲೆಯಲ್ಲಿ ಆರ್ ಎಸ್ ಎಸ್, ಬಿಜೆಪಿ ಕೈವಾಡ ಇದೆ ಎಂದು ಬಹಿರಂಗವಾಗಿ ಸಂಶಯ ವ್ಯಕ್ತಪಡಿಸಿದ್ದು ಗಮನಾರ್ಹ ಎಂದರು.
ಬಿಜೆಪಿ ವರಿಷ್ಟ ಬಿ. ಎಲ್. ಸಂತೋಷ ಅವರು ಕುರುಬ ನಾಯಕ ಕೆ.‌ಎಸ್. ಈಶ್ವರಪ್ಪ ಅವರ ಹೆಗಲ ಮೇಲೆ ಗನ್ ಇಟ್ಟು ಹಿನ್ನೆಲೆ ಆಟ ಆಡುತ್ತಿದ್ದಾರೆ.

ಕುರುಬರ ನಾಯಕ, ಸಮಸ್ತ ಅಹಿಂದ ವರ್ಗಗಳ ಮುಖ್ಯಸ್ಥ ಸಿದ್ದರಾಮಯ್ಯ ಅವರನ್ನು ಸರಕಾರದಲ್ಲಿರುವ ಕುರುಬ ಸಚಿವ, ಶಾಸಕ ಹಾಗೂ ನಾಯಕರು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮಾರ್ಗದರ್ಶನ ಪಡೆಯದೇ ಬಿಜೆಪಿ ರಾಷ್ಟ್ರೀಯ ಮುಖಂಡ ಬಿ.‌ಎಲ್. ಸಂತೋಷ ಅವರ ಮೋಸದ ರಾಜಕಾರಣಕ್ಕೆ ತಲೆಬಾಗುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಶಾಸಕಾಂಗ ಸಭೆ ಮತ್ತು ಸರಕಾರದ ಪಡಸಾಲೆಯಲ್ಲಿ ಕುರುಬ ಸಮಾಜದ ಸಚಿವ ಶಾಸಕದ್ವಯರು ಧ್ವನಿ ಎತ್ತದೆ ಬೀದಿ ಹೋರಾಟ ಮಾಡಿದರೆ ಎಸ್ಟಿ ಮೀಸಲಾತಿ ಸಿಗದು, ಇಂತಹ ನಾಟಕವನ್ನು ಸಮಾಜ ಸಹ ಒಪ್ಪಿಕೊಳ್ಳದು ಎಂಬುವುದನ್ನು ಸಚಿವ ಕೆ. ಎಸ್. ಈಶ್ವರಪ್ಪ ಮತ್ತು ನಾಯಕರು ಅರ್ಥ ಮಾಡಿಕೊಳ್ಳಬೇಕು.
ಬಿ. ಎಲ್. ಸಂತೋಷ, ಆರ್ ಎಸ್ ಎಸ್ ಮತ್ತು ಬಿಜೆಪಿ ಪಕ್ಷದ ಮೋಸದಾಟಕ್ಕೆ ಬಲಿಯಾಗಿ ಸಮಾಜದ ಹಿತ ಕಡೆಗಣಿಸಬಾರದು ಎಂದು ಸಲಹೆ ನೀಡಿದರು.
ಗುರಪ್ಪ ಹಿಟ್ಟಣಗಿ, ಯಲ್ಲಪ್ಪ ಹೆಗಡೆ, ಮಾಳಪ್ಪ ಬಿದರಿ, ಸುರೇಶ ಮಗದುಮ, ಬಸವರಾಜ ಕುಕಡೊಳ್ಳಿ, ದೊಡ್ಡಸಿದ್ದಪ್ಪ ಖಾನಟ್ಟಿ, ನಿಂಗಪ್ಪ ದೊಡ್ಡಮನಿ ಉಪಸ್ಥಿತರಿದ್ದರು.