ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿಯೇ ಒಂದು ಮಾದರಿ ಬ್ಯಾಂಕ್  ಆಗಿ ಬೆಳೆಯುವಲ್ಲಿ ಕತ್ತಿ ಸಹೋದರರ ಪಾತ್ರ

0

ಕಬ್ಬೂರ : ಬೆಳಗಾವಿ  ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿಯೇ ಒಂದು ಮಾದರಿ ಬ್ಯಾಂಕ್  ಆಗಿ ಬೆಳೆಯುವಲ್ಲಿ ಕತ್ತಿ ಸಹೋದರರ ಪಾತ್ರ ಮಹತ್ತರವಾಗಿದೆ ಎಂದು ಶಾಸಕ ದುರ್ಯೋಧನ ಐಹೋಳೆ ಹೇಳಿದರು.

ಕಬ್ಬೂರ ಗ್ರಾಮದಲ್ಲಿ ಸೋಮವಾರ ನಡೆದ ಕಲ್ಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಮಲ್ಲಿಕಾರ್ಜುನ ಮಾಳಿ ಸಮಾಜ ಕ್ಷೇಮಾಭಿವೃದ್ಧಿ ಸಂಘ ಮತ್ತು ಕಲ್ಮೇಶ್ವರ ಸಹಕಾರಿ ಸಂಘ ಹಾಗೂ ಅಕ್ಕ ಮಹಾದೇವಿ ಮಹಿಳಾ ಮಂಡಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಬಡ ರೈತರಿಗೂ ಸಾಲ ಕೊಡುವ ಮೂಲಕ ಅವರ ಆರ್ಥಿಕ ಪ್ರಗತಿಗೆ ಸಹಕಾರಿ ಸಂಘಗಳು ಮುಂದಾಗಬೇಕು. ಸಹಕಾರಿ ಸಂಘಗಳಿಂದ ಬಡವರು, ದೀನದಲಿತರು, ಸಾಮಾನ್ಯ ರೈತರ ಪ್ರಗತಿ ಸಾಧ್ಯ. ಆ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕಿನಿಂದ ರೈತರಿಗೆ ಶೇ.3 ರ ಬಡ್ಡಿದರದಲ್ಲಿ ಟ್ರ್ಯಾಕ್ಟರ್ ಖರೀದಸಲು, ಪೈಪ್‍ಲೈನ್ ಮಾಡಲು ಮತ್ತು ಹೈನುಗಾರಿಕೆ ಕೈಗೊಳ್ಳಲು ಸಹಕಾರಿ ಸಂಘಗಳು ಮುಖಾಂತರ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.

ಜಿ.ಪಂ.ಸದಸ್ಯ ಪವನ ಕತ್ತಿ ಮಾತನಾಡಿ, ಸಂಘ-ಸಂಸ್ಥೆಗಳನ್ನು ರಾಜಕೀಯದಿಂದ ದೂರವಿಟ್ಟು ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸಿದರೇ ಮಾತ್ರ ಒಂದು ಸಹಕಾರಿ ಸಂಘ ಬೆಳೆಯಲು ಸಾಧ್ಯ ಎಂದು ಹೇಳಿದರು.

ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ ಸನ್ಮಾನ ಸ್ವೀಕರಿಸಿ, ಭಾರತ ಭೂಮಿಯಲ್ಲಿ ಸಹಕಾರ ಎಂಬುದು ಒಂದು ಶಕ್ತಿಯಾಗಿ ಬೆಳೆದಿದೆ. ಸಹಕಾರ ನಮ್ಮ ಭಾರತ ದೇಶದ ಜನರಲ್ಲಿ ಹಾಸುಹೊಕ್ಕಾಗಿದೆ. ಪರಸ್ಪರ ಸಹಕಾರದಿಂದ ನಮ್ಮ ದೇಶದ ಪ್ರಗತಿ ಸಾಧ್ಯ ಎಂದರು.

ಶ್ರೀಶೈಲಪೀಠದ ಶ್ರೀ 1008 ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಗಳು, ಕಲ್ಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಮಲ್ಲಿಕಾರ್ಜುನ ಮಾಳಿ ಸಮಾಜ ಕ್ಷೇಮಾಭಿವೃದ್ಧಿ ಸಂಘ ಮತ್ತು ಕಲ್ಮೇಶ್ವರ ಸಹಕಾರಿ ಸಂಘ ಹಾಗೂ ಅಕ್ಕಮಹಾದೇವಿ ಮಹಿಳಾ ಮಂಡಳ ಕಬ್ಬೂರ ಇವಗಳ ಉದ್ಘಾಟನೆ ನೆರವೇರಿಸಿದರು.

ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಷ ಡವಳೇಶ್ವರ, ಅಪ್ಪಾಸಾಹೇಬ ಕುಲಗೋಡ, ನೀಲಕಂಠ ಕಪ್ಪಲಗುದ್ದಿ, ಬಿಡಿಸಿಸಿ ಬ್ಯಾಂಕ ಪ್ರಧಾನ ವ್ಯವಸ್ಥಾಪಕ ಸುರೇಶ ಅಳಗುಂಡಿ, ಬ್ಯಾಂಕ ನಿರೀಕ್ಷಕ ಬಿ.ಎಸ್.ಉತ್ತುರೆ,  ಸಾಧಕರಾದ ಎಂ.ಎಸ್.ಸೋನಾವನೆ ಮತ್ತು ಎ.ಬಿ.ಕಬ್ಬೂರಯವರನ್ನು ಸನ್ಮಾನಿಸಲಾಯಿತು.

ಸುಣದೋಳಿಯ ಶಿವಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಕೇಶ್ವರ ಹಿರಾಶುಗರ ನಿರ್ದೇಶಕ ಸುರೇಶ ಬೆಲ್ಲದ, ಮಹಾಲಿಂಗ ಹಂಜಿ, ಎಂ.ಜಿ.ಜಿವನಿ, ಬಸಲಿಂಗ ಕಾಡೇಶಗೋಳ, ವಿಶ್ವಹೀಂದು ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಠ್ಠಲ ಮಾಳಿ, ಶಂಕ್ರಯ್ಯ ಮಠದ, ಮಲ್ಲಪ್ಪ ಜಿವನಿ, ನಾಗಪ್ಪ ಮಗದುಮ್ಮ, ಅರ್ಜುನ ಕಿವಡ ಮುಂತಾದವರು ಉಪಸ್ಥಿತರಿದ್ದರು. ಡಾ. ಆರ್.ಕೆ.ಬಾಗಿ ಸ್ವಾಗತಿಸಿದರು. ಜಿ.ಬಿ.ಸಂಗಟೆ ಮತ್ತು ಎಂ.ಎಸ್.ಸೋನಾವನೆ ನಿರೂಪಿಸಿದರು. ಸುಜಾತಾ ಗೋಂದಳಿ ವಂದಿಸಿದರು.