ರಾಜ್ಯ ಮೀಸಲು ಪೋಲಿಸ್ ಪಡೆಗೆ ಎನ್.ಡಿ.ಎ ಮಾದರಿಯಲ್ಲಿ ತರಬೇತಿ ನೀಡಲು ಚಿಂತನೆ : ಬಸವರಾಜ ಬೊಮ್ಮಾಯಿ

0

ಬೆಳಗಾವಿ, ಡಿ.1 : ರಾಜ್ಯದ ವಿಶೇಷ ಮೀಸಲು ಪಡೆಗೆ ಸದ್ಯದಲ್ಲೇ ಎನ್.ಡಿ.ಎ ಮಾದರಿಯಲ್ಲಿ ತರಬೇತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.


ನಗರದ ಕಂಗ್ರಾಳಿಯ ಕೆ.ಎಸ್.ಆರ್.ಪಿ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಮಂಗಳವಾರ(ಡಿ.1) ನಡೆದ ಕರ್ನಾಟಕ ರಾಜ್ಯ ಮೀಸಲು ಪೋಲಿಸ್ 6 ನೇ ತಂಡದ ಪುರುಷ ವಿಶೇಷ ಮೀಸಲು ಪೋಲಿಸ್ ಕಾನ್ಸಟೇಬಲ್ ಪ್ರಶಿಕ್ಷಾರ್ಥಿಗಳ ನಿರ್ಗಮನ ಪಥಸಂಚಲನ ಪರಿವೀಕ್ಷಿಸಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಮೀಸಲು ಪಡೆಯ ಭರ್ತಿ ಸ್ವರೂಪದಲ್ಲಿ ಬದಲಾಗವಣೆ ತರಲಾಗುವುದು. ಮೀಸಲು ಪೋಲಿಸ್ ಪಡೆಗೆ ದೊರೆಯದ ಹಲವಾರು ಬೇರೆ ಬೇರೆ ಅವಕಾಶಗಳನ್ನು ನೀಡುತ್ತೇವೆ. ಎನ್.ಡಿ.ಎ ಮಾದರಿಯಲ್ಲಿ ತರಬೇತಿ ನೀಡಲು ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಇಲಾಖೆಗೆ ಎಲ್ಲ ರೀತಿಯ ಸಹಾಯ ಮಾಡಲಾಗುವುದು.

ಕರ್ನಾಟಕ ರಾಜ್ಯ ಮೀಸಲು ಪೋಲಿಸ್ ಪಡೆ ರಾಷ್ಟ್ರದಲ್ಲಿಯೇ ಅತೀ ಶ್ರೇಷ್ಠವಾದ ಪಡೆಯಾಗಿದೆ. ಇಲ್ಲಿ ನೀಡುವ ತರಬೇತಿ ನಿಮ್ಮಲ್ಲಿ ಧೈರ್ಯ, ಆತ್ಮಸ್ಥೈರ್ಯ ತುಂಬುವ ಮೂಲಕ ನಿಮ್ಮಲ್ಲಿರುವ ಹೊಸ ಚಿಂತನೆಯನ್ನು ಪ್ರಚೋದಿಸುವ ತರಬೇತಿಯನ್ನು ಈ ಇಲಾಖೆ ನೀಡುತ್ತಿದೆ.

ಮುಂದಿನ ಎರಡು ವರ್ಷಗಳಲ್ಲಿ 16 ಸಾವಿರ ಹುದ್ದೆ ಭರ್ತಿ:
ಮುಂದಿನ ಎರಡು ವರ್ಷದಲ್ಲಿ 16000 ಕೆ.ಎಸ್.ಆರ್.ಪಿ ಹುದ್ದೆಗಳನ್ನು ಭರ್ತಿಮಾಡಲಾಗುವುದು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಸಾಮಾನ್ಯ ತರಬೇತಿಯ ಜೊತೆಗೆ ಆಧುನಿಕ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಪ್ರಶಿಕ್ಷಾಣಾರ್ಥಿಗಳಲ್ಲಿ ಬೆಳೆಸುವ ಕಾರ್ಯವನ್ನು ಮಾಡಲಾಗುತ್ತದೆ.

ತರಬೇತಿಯಲ್ಲಿ ಹೆಚ್ಚಿನ ರೀತಿಯ ಹೊಸ ಹೊಸ ವಿಧಾನ ತರಲು ಚಿಂತನೆ ಮಾಡಲಾಗಿದೆ. 2021-22 ರಲ್ಲಿ ಪೋಲಿಸ್ ತರಬೇತಿ ಶಾಲೆಗಳ ಜೊತೆ ಚರ್ಚಿಸಿ ಅತ್ಯುತ್ತಮ ಪ್ರದರ್ಶನ ನೀಡಿರುವ ಪ್ರಶಿಕ್ಷಣಾರ್ಥಿಗಳನ್ನು ತರಬೇತಿಗೆ ವಿದೇಶಕ್ಕೆ ಕಳಿಸಲಾಗುವುದು ಎಂದು ಅವರು ತಿಳಿಸಿದರು.

ಸಮವಸ್ತ್ರ ಮತ್ತು ಶಸ್ತ್ರಾಸ್ತ್ರಗಳ ಜೊತೆ ನಿಮ್ಮ ವೃತ್ತಿಗೆ ಗೌರವ ನೀಡಿ ಉತ್ತಮ ರೀತಿಯ ನ್ಯಾಯಸಮ್ಮತ ಕಾರ್ಯನಿರ್ವಹಿಸಬೇಕು. ಸಾಧಕನಿಗೆ ಸಾವು ಅಂತ್ಯವಲ್ಲ ಎಂಬ ವಿವೇಕಾನಂದರ ವ್ಯಾಕ್ಯವನ್ನು ನೆನೆಯುತ್ತಾ ದೈಹಿಕ ಬಲದ ಜೊತೆಗೆ ನೈತಿಕ ಬಲವನ್ನು ರೂಢಿ ಮಾಡಿಕೊಳ್ಳಬೇಕು ಎಂದು ಸಚಿವರು ಪ್ರಶಿಕ್ಷಣಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕೆ.ಎಸ್.ಆರ್.ಪಿ ತರಬೇತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ಕೊರೋನಾ ಸೋಂಕಿಗೆ ಹುತಾತ್ಮರಾದ ಪೋಲಿಸ್ ಸಿಬ್ಬಂದಿಯ ಕುಟುಂಬಕ್ಕೆ ಪರಿಹಾರ ಧನ ನೀಡಲಾಯಿತು.

ಡಿ.ಜಿ ಮತ್ತು ಐ.ಜಿ.ಪಿ ಪ್ರವೀಣ್ ಸೂದ್ ಉಪಸ್ಥಿತರಿದ್ದರು. ಕೆ.ಎಸ್.ಆರ್.ಪಿ ಎ.ಡಿ.ಜಿ.ಪಿ ಅಲೋಕ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ನಿಂಬರಗಿ, ಕೆ.ಎಸ್.ಆರ್.ಪಿ. 2ನೇ ಪಡೆ ಕಮಾಂಡೆಂಟ್ ಹಂಜಾ ಹುಸೇನ್, ಕೆ.ಎಸ್.ಆರ್.ತರಬೇತಿ

ಶಾಲೆಯ ಪ್ರಾಂಶುಪಾಲರಾದ ರಮೇಶ ಎ.ಬೋರಗಾವೆ, ರಾಜ್ಯದ ಎಲ್ಲ ಕೆ.ಎಸ್.ಆರ್.ಪಿ ಪಡೆಗಳ ಅಧಿಕಾರಿಗಳು ಹಾಗೂ ಕೆ.ಎಸ್.ಆರ್.ಪಿ ಸಿಬ್ಬಂದಿ ಅಧಿಕಾರಿಗಳು ಮತ್ತು ಪ್ರಶಿಕ್ಷಣಾರ್ಥಿಗಳ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.