ಎಚ್‍ಐವಿ/ಏಡ್ಸ್- ಚಿಕಿತ್ಸೆಯಿಂದ ಯಾರೂ ವಂಚಿತರಾಗಬಾರದು: ವಿಜಯ್ ದೇವರಾಜ್ ಅರಸ್

0

ಬೆಳಗಾವಿ, ಡಿ.1 : ಎಚ್.ಐ.ವಿ/ಏಡ್ಸ್ ಕಾಯಿಲೆಯಿಂದ ಬಳಲುತ್ತಿರುವ ಯಾವುದೇ ವ್ಯಕ್ತಿಯು ಚಿಕಿತ್ಸೆಯಿಂದ ವಂಚಿತರಾಗದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗೌರವ ಕಾರ್ಯದರ್ಶಿಗಳು ವಿಜಯ ದೇವರಾಜ ಅರಸ್ ಅವರು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಕ ಘಟಕದ ವತಿಯಿಂದ ಮಂಗಳವಾರ (ಡಿ.1) ಬಿಮ್ಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ “ವಿಶ್ವ ಏಡ್ಸ್ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಯಾರಿಗೂ ಯಾವುದೇ ವಿಷಯದಲ್ಲಿ ತಾರತಮ್ಯ ಆಗಂದಂತೆ ನೋಡಿಕೊಳ್ಳಲು ಅನೇಕ ಕಾಯಿದೆಗಳನ್ನು ಜಾರಿಗೆ ತರಲಾಗಿದೆ. ಆದ್ದರಿಂದ ಈ ಮಾರಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಚಿಕಿತ್ಸೆಯಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಬಾರದು ಎಂದರು.

ಎಚ್‍ಐವಿ/ಏಡ್ಸ್ ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದರ ಮೂಲ ಉದ್ದೇಶ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು.

ಸೋಂಕಿತರ ಚಿಕಿತ್ಸೆ ಮತ್ತು ಗೌಪ್ಯತೆ ಕಾಪಾಡಲು ಹಲವಾರು ರೀತಿಯ ಕಾಯಿದೆಗಳನ್ನು ಜಾರಿಗೆ ತರಲಾಗಿದ್ದು, ಇಆರ್‍ಟಿ ಸೆಂಟರ್ ಮೂಲಕ ಕಾನೂನಾತ್ಮಕವಾಗಿ ಗೌಪ್ಯವಾಗಿ ಹೇಗೆ ಚಿಕಿತ್ಸೆ ನೀಡಲಾಗುವುದು ಹಾಗು ಕಾನೂನಾತ್ಮಕವಾಗಿ ಸಹಾಯವನ್ನು ಮಾಡುವುದಾಗಿ ವಿಜಯ ದೇವರಾಜ ಅರಸ್ ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಬೆಳಗಾವಿ ಶಶಿಕಾಂತ ಮುನ್ಯಾಳ ಅವರು, ಮಾರಕ ರೋಗದ ವಿರುದ್ಧ ಹೋರಾಡುವುದು ಕೇವಲ ವೈದ್ಯರ ಹಾಗೂ ರೋಗಿಯ ಜವಾಬ್ದಾರಿಯಲ್ಲ; ಅದು ಒಂದು ಸಮಾಜದ ಸಂಘಟಿತ ಕಾರ್ಯವಾಗಿದ್ದು ಅದು ಹರಡದಂತೆ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.

ಎಚ್‍ಐವಿ/ಏಡ್ಸ್ ವಿರುದ್ಧ ಹೋರಾಟದಲ್ಲಿ ವೈದ್ಯರು ಮಾತ್ರವಲ್ಲದೆ ಹಲವಾರು ಸಂಘ-ಸಂಸ್ಥೆಗಳು ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿವೆ. ಅಂತಹ ಸಂಘ-ಸಂಸ್ಥೆಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಮೊದಲಿನ ದಿನಗಳಿಗೆ ಹೋಲಿಕೆ ಮಾಡಿದರೆ ಇತ್ತೀಚಿನ ದಿನಗಳಲ್ಲಿ ಈ ಒಂದು ಕಾಯಿಲೆಯ ಪ್ರಮಾಣ ಕಡಿಮೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ರೀತಿಯ ಚಿಕಿತ್ಸಾ ವಿಧಾನಗಳು ಕೂಡ ಯಶಸ್ವಿಯಾಗುತ್ತಿವೆ. ಮುಂಬರುವ ದಿನಗಳಲ್ಲಿ ಲಸಿಕೆ ಕೂಡ ಲಭ್ಯವಾಗಬಹುದು ಎಂದು ಡಾ.ಮುನ್ಯಾಳ ಹೇಳಿದರು.

“ ಹೆಚ್‍ಐವಿ ಸೋಂಕಿನ ತಡೆಗಾಗಿ ಜಾಗತಿಕ ಒಗ್ಗಟ್ಟು ಹಾಗೂ ಜವಾಬ್ದಾರಿಯ ಹಂಚಿಕೆ ” ಎಂಬುದು ಈ ವರ್ಷದ ಘೋಷ ವಾಕ್ಯವಾಗಿದೆ. ಅದರಂತೆ ಇಡೀ ಸಮಾಜವು ಈ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಬಿಮ್ಸ್ ನೋಡಲ್ ಅಧಿಕಾರಿ ಗಿರಿಧರ್ ಪಾಟೀಲ ಅವರು, ಏಡ್ಸ್ ಹರಡುವ ವಿಧಾನ, ಲಭ್ಯವಿರುವ ಚಿಕಿತ್ಸೆಗಳು, ಔಷಧೋಪಚಾರ ಹಾಗೂ ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು.
ವಾರ್ಷಿಕ ಸಾಧನೆಯ ಕುರಿತಂತೆ ಎಮ್.ಎಮ್.ಸನದಿ, ಜಿಲ್ಲೆಯಲ್ಲಿ 33 ಸಮಗ್ರ ಆಪ್ತಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರಗಳಿದ್ದು, ಪ್ರತಿಯೊಂದು ಕೇಂದ್ರದಲ್ಲಿ ಆಪ್ತಸಮಾಲೋಚಕರಿದ್ದು ಪರೀಕ್ಷಾ ಪೂರ್ವ ಮತ್ತು ಪರೀಕ್ಷಾ ನಂತರದ ಆಪ್ತ ಸಮಾಲೋಚನೆಯ ಜೊತೆಗೆ ಉಚಿತವಾಗಿ ಹೆಚ್‍ಐವಿ ಪರೀಕ್ಷೆಯನ್ನು ಮಾಡಲಾಗುತ್ತದೆ ಎಂದು ವಿವರಿಸಿದರು.

ಇದಲ್ಲದೇ ಜಿಲ್ಲೆಯಲ್ಲಿ 165 ಎಫ್.ಆಯ್.ಸಿ.ಟಿ , ಕೇಂದ್ರಗಳಲ್ಲಿ ಹೆಚ್‍ಐವಿ ಪರೀಕ್ಷೆ ಮಾಡಲಾಗುತ್ತಿದ್ದು, ಸೋಂಕು ಕಂಡುಬಂದರೆ ಸಮೀಪದ ಸಮಗ್ರ ಆಪ್ತ ಸಮಾಲೋಚನಾ ಕೇಂದ್ರಕ್ಕೆ ರೆಫರ್ ಮಾಡಲಾಗುತ್ತದೆ ಎಂದರು.

ಏಪ್ರಿಲ್ -2020 ರಿಂದ ಅಕ್ಟೋಬರ್ -2020 ರವರೆಗೆ 50 ಹೆಚ್‍ಐವಿ ಸೋಂಕಿತ ಮಹಿಳೆಯರ ಹೆರಿಗೆಗಳಾಗಿದ್ದು, ಜನಿಸಿದ ಎಲ್ಲ 52 ಮಕ್ಕಳಿಗೆ ಎನ್.ವಿ.ಪಿ. ಸಿರಪ್ ನೀಡಲಾಗಿದೆ ಎಂದು ತಿಳಿಸಿದರು.
ಸನ್ಮಾನ ಕಾರ್ಯಕ್ರಮ:

ಎಚ್.ಐ.ವಿ. ಕಾಯಿಲೆಯ ವಿರುದ್ಧ ಹೋರಾಡಿದ ಹಾಗೂ ಕಾಯಿಲೆ ನಿಯಂತ್ರಣ ಮತ್ತು ಅರಿವು ಮೂಡಿಸುವಲ್ಲಿ ಉತ್ತಮ ಸೇವೆ ಸಲ್ಲಿಸಿದ ಹಲವಾರು ಸಂಘ-ಸಂಸ್ಥೆಗಳಿಗೆ ಹಾಗೂ ಕಾರ್ಯಕರ್ತರಿಗೆ ನೆನಪಿನ ಕಾಣಿಕೆಯೊಂದಿಗೆ ಪ್ರಮಾಣ ಪತ್ರ ನೀಡಿ ಸನ್ಮಾನ ಮಾಡಲಾಯಿತು.

ಜಿಲ್ಲಾ ಏಡ್ಸ್ ನಿಯಂತ್ರಾಣಾಧಿಕಾರಿ ಅನಿಲ ಕೊರಬು ಸ್ವಾಗತಿಸಿದರು, ಆರೋಗ್ಯ ಮೇಲ್ವಿಚಾರಕ ಸಿ. ಈ. ಅಗ್ನಿಹೊತ್ರಿ ಕಾರ್ಯ ನಿರೂಪಿಸಿ, ವಂದಿಸಿದರು.


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಉಪ ನಿರ್ದೇಶಕರಾದ ಡಾ.ಶೈಲಜಾ ತಮ್ಮಣ್ಣವರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಬಿ.ಎನ್. ತುಕ್ಕಾರ್, ಆರ್.ಸಿ.ಎಚ್. ಡಾ. ಐ.ಪಿ.ಗಡಾದ, ಡಾ. ಕಿವಡಸಣ್ಣವರ ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.