ಚಳಿಗಾಲ ಅಧಿವೇಶನ ಆರಂಭ

0

ಬೆಂಗಳೂರು, ಡಿ. 7- ಸೋಮವಾರದಿಂದ ಡಿಸೆಂಬರ್ 15ರವರೆಗೆ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭ ಗೊಂಡಿ ದ್ದು, ವಿಧಾನಸಭೆಯಲ್ಲಿಂದು ಇತ್ತೀಚೆಗೆ ನಿಧನರಾದ ಗಣ್ಯರಿಗೆ ಗೌರವ ನಮನ ಸಲ್ಲಿಸಲಾಯಿತು. ಮೃತರ ಗೌರವಾರ್ಥ ಒಂದು ನಿಮಿಷ ಮೌನಾಚರಿಸಲಾಯಿತು.

 

ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ರಾಮವಿಲಾಸ ಪಾಸ್ವಾನ್, ಗಣ್ಯರಾದ ವೈ.ನಾಗಪ್ಪ, ಬಸವಂತ್ ಐರೋಜಿ ಪಾಟೀಲ್, ಕೆ.ಮಲ್ಲಪ್ಪ ರತನ್ ಕುಮಾರ್, ಜಸ್ವಂತ್ ಸಿಂಗ್, ಜಿ. ಎಸ್. ಅಮೂರ, ವಿ.ಎಸ್.ಸೋಂದೆ, ರವಿ ಬೆಳಗೆರೆ ಸೇರಿ ದಂತೆ ಹಲವರ ನಿಧನ ವಿಷಯವನ್ನು ಪ್ರಸ್ತಾಪಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಕ ಪ್ರಸ್ತಾಪವನ್ನು ಮಂಡಿಸಿದರು.

 

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಸಂತಾಪ ಸೂಚಕವನ್ನು ಬೆಂಬಲಿಸಿ, ರಾಮವಿಲಾಸ ಪಾಸ್ವಾನ್ ದೇಶದ ದಲಿತ ನಾಯಕ ರಾಗಿದ್ದರು, ದೇಶದಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

 

ಡಾ.ವೈ.ನಾಗಪ್ಪ, ಬಸವ ತತ್ವದ ಅನುಯಾಯಿಯಾಗಿದ್ದರು. ಹರಿಹರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ದ್ದರು. ಸಾಮಾಜಿಕ ನ್ಯಾಯದ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿದ್ದರು ಎಂದು ಹೇಳಿದರು.

 

ಜಸ್ವಂತ್ ಸಿಂಗ್ ನಿಷ್ಠುರ ರಾಜಕಾರಣಿಯಾಗಿದ್ದರು. ಸೇನಾಧಿಕಾರಿ, ಲೇಖಕರಾಗಿದ್ದ ಅವರು ರಕ್ಷಣಾ ಖಾತೆ ಸೇರಿ ಹಲವು ಖಾತೆಗಳನ್ನು ನಿಭಾ ಯಿಸಿದ್ದರು. ರಾಜಕೀಯವಾಗಿ ಎಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂದು ಮುಖ್ಯ ಮಂತ್ರಿ ಹೇಳಿದರು.

 

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವರಾದ ಗೋವಿಂದ ಕಾರಜೋಳ, ಜೆ.ಸಿ.ಮಾಧುಸ್ವಾಮಿ, ಜೆಡಿಎಸ್ ಶಾಸಕ ಎಚ್. ಕೆ. ಕುಮಾರ ಸ್ವಾಮಿ, ಯು.ಟಿ.ಖಾದರ್, ಎನ್.ಮಹೇಶ್ ಮಾತನಾಡಿ ಸಂತಾಪ ಸೂಚಿಸಿದರು.

 

ಕಲಾಪದ ಮೊದಲ ದಿನವೇ ಸದನದಲ್ಲಿ ಖುರ್ಚಿಗಳು ಖಾಲಿ ಖಾಲಿಯಾಗಿರುವುದು ಕಂಡು ಬಂದಿದ್ದು, ಸಾಕಷ್ಟು ಸಚಿವರು, ಶಾಸಕರು ಮೊದಲ ದಿನದ ಅಧಿವೇಶನದಲ್ಲಿಯೇ ಕಲಾಪಕ್ಕೆ ಗೈರು ಹಾಜರಾಗಿರುವುದು ಕಂಡು ಬಂದಿದೆ.

 

ಆಡಳಿತರೂಢ ಬಿಜೆಪಿ ಪಕ್ಷದಿಂದ 11 ಸಚಿವರು ಮತ್ತು 26 ಶಾಸಕರು ಮಾತ್ರ ಸದನದಲ್ಲಿ ಹಾಜರಿದ್ದು, ಕಾಂಗ್ರೆಸ್ ಪಕ್ಷದಿಂದ 25 ಶಾಸಕರು ಹಾಜರಿದ್ದರು. ಇನ್ನು ಜೆಡಿಎಸ್ ಪಕ್ಷದಿಂದ ಕೇವಲ 5 ಮಂದಿ ಶಾಸಕರು ಮಾತ್ರ ಹಾಜರಿದ್ದರು. ವಿಶೇಷವೆಂದರೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಕೂಡ ಅಧಿವೇಶನದಲ್ಲಿ ಗೈರು ಹಾಜರಾಗಿದ್ದಾರೆ.///