ನಿಜ ಜೀವನದ ನೀತಿ ಸಂಹಿತೆ ಹಾಕಿಕೊಟ್ಟ ಬಸವ ಧರ್ಮ ; ಡಾ . ಮಲ್ಲಿಕಾರ್ಜುನ ಸ್ವಾಮೀಜಿ

0

ಬೆಳಗಾವಿ : ನಿಜ ಜೀವನದಲ್ಲಿ ನೀತಿ ಸಂಹಿತೆಯನ್ನು ಹಾಕಿಕೊಟ್ಟ ಧರ್ಮ ಯಾವುದಾದರೂ ಇದ್ದರೆ ಅದು ಬಸವಧರ್ಮ ಮಾತ್ರ ಎಂದು ಶಿವಮೊಗ್ಗ ಆನಂದಪುರಂ ಮುರುಘಾಮಠದ ಶ್ರೀ ಮನ್ನಿರಂಜನ ಜಗದ್ಗುರು ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು .
ಅವರಿಂದು ಬೆಳಗಾವಿಯಲ್ಲಿ ಲಿಂಗೈಕ್ಯ ಡಾ . ಶಿವಬಸವ ಮಹಾಸ್ವಾಮಿಗಳು ರುದ್ರಾಕ್ಷಿಮಠ ನಾಗನೂರು ಇವರ 131 ನೇ ಜಯಂತಿ ಮಹೋತ್ಸವಕ್ಕೆ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡುತ್ತಿದ್ದರು .

ಬಸವಾದಿ ಶರಣರು ನಿರೂಪಿಸಿದ ನಮ್ಮ ಧರ್ಮ ನಮ್ಮ ಸಂಸ್ಕೃತಿಯ ಪ್ರತೀಕ ಷಟಸ್ಥಳ ಧ್ವಜವಾಗಿದೆ ,ಜೀವನದಲ್ಲಿ ಉನ್ನತ ಮಟ್ಟದ ಆದರ್ಶ ತತ್ತ್ವಗಳನ್ನು ಅಳವಡಿಸಿಕೊಂಡು ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ,ಅಧೋಮುಖವಾಗಿರುವ ಇಂದ್ರಿಯಗಳನ್ನು ಊಧ್ರ್ವ ಮುಖವಾಗಿಸಿಕೊಳ್ಳುವ ಮೂಲಕ ಜೀವನದಲ್ಲಿ ಸುಖ ಶಾಂತಿ ಕಂಡುಕೊಳ್ಳಬೇಕು ಎಂದು ಅವರು ಹೇಳಿದರು .

ದೇವನೊಬ್ಬ ನಾಮ ಹಲವು ಆದರೆ ಏಕದೇವೋಪಾಸನೆ ಅತಿ ಶ್ರೇಷ್ಠವಾದುದು ಎಂದು ಬಸವ ತತ್ವ ಹೇಳಿದೆ , ಹಲವು ದೇವರುಗಳನ್ನು ಬೆನ್ನತ್ತಿ ಹೋಗದೆ ಒಬ್ಬನೇ ದೇವನನ್ನು ಕರಸ್ಥಲಕ್ಕೆ ತಂದ ಶರಣರು ಭಕ್ತಶ್ರೇಷ್ಠ ರಾದರು ಎಂದು ಅವರು ಹೇಳಿದರು .

ಈ ಕಾರ್ಯಕ್ರಮದ ಸಾನ್ನಿಧ್ಯದಲ್ಲಿ ಗದುಗಿನ ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಹಾಗೂ ನಾಗನೂರು ರುದ್ರಾಕ್ಷಿಮಠ ಬೆಳಗಾವಿಯ ಜಗದ್ಗುರು ಡಾ ತೋಂಟದ ಸಿದ್ಧರಾಮ ಸ್ವಾಮೀಜಿಯವರು ಉಪಸ್ಥಿತರಿದ್ದರು .

ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಪೀಠಾಧಿಪತಿ ಡಾ .ಅಲ್ಲಮಪ್ರಭು ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದ ಸಮ್ಮುಖದಲ್ಲಿ ಬೆಳಗಾವಿ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿ ಅವರು ಉಪಸ್ಥಿತರಿದ್ದರು .

ವಚನ ಪ್ರಾರ್ಥನೆ ಶ್ರೀಮತಿ ವಿಜಯಲಕ್ಷ್ಮಿ ಹೊಸಮನಿ ಹಾಗೂ ಪ್ರಭುದೇವ ಪ್ರತಿಷ್ಠಾನದ ಮಾತ್ರ ಮಂಡಳಿಯವರಿಂದ ,ಸ್ವಾಗತ ಪ್ರೊ ಸಿ ಜಿ ಮಠಪತಿ ಅವರಿಂದ ,ಎಸ್ ಜಿ ಬಾಳೇಕುಂದ್ರಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಫ್. ವಿ. ಮಾನವಿ ಮಾಲಾರ್ಪಣೆ ಮಾಡಿದರೆ ಸುರೇಶ ಗಾಡವಿ ಜಂಗಮ ಪಾದಪೂಜೆ ನೆರವೇರಿಸಿದರು.ಪ್ರೊ .ಎ.ಕೆ.ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು .ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ ಬಿ ಹಿರೇಮಠ ಅವರು ವಂದಿಸಿದರು .

ಇದೇ ವೇಳೆ ಲಿಂಗೈಕ್ಯ ಡಾ.ಶಿವಬಸವ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಗೌರವ ಸಮರ್ಪಿಸಲಾಯಿತು. ಇದೇ ಸಂದರ್ಭದಲ್ಲಿ ನಾಗನೂರು ರುದ್ರಾಕ್ಷಿ ಮಠದ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ನೂತನ ಕಾರ್ಯಾಲಯವನ್ನು ಉದ್ಘಾಟಿಸಲಾಯಿತು. ಚಿತ್ರದಲ್ಲಿ ಗದಗ ತೋಂಟದಾರ್ಯ ಮಠದ ಜಗದ್ಗುರು ಡಾ. ಶ್ರೀ ಸಿದ್ದರಾಮ ಮಹಾಸ್ವಾಮಿಗಳು, ಶಿವಮೊಗ್ಗದ ಮುರುಘಾ ಮಠದ ಜಗದ್ಗುರು ಶ್ರೀ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಶ್ರೀ ಗುರುಸಿದ್ಧ ಮಹಾಸ್ವಾಮಿಗಳು, ಮಡಿವಾಳ ಶ್ರೀ ರಾಜಯೋಗಿಂದ್ರ ಮಹಾಸ್ವಾಮಿಗಳು, ಶ್ರೀ ಗುರುಬಸವ ಮಹಾಸ್ವಾಮಿಗಳು ಹಾಗೂ ಮುಂತಾದವರನ್ನು ಕಾಣಬಹುದು.