ರಸ್ತೆ ಸುರಕ್ಷತಾ ಸಪ್ತಾಹ ಡಿ.21 ರಿಂದ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

0

ಬೆಳಗಾವಿ, ಡಿ.8: ರಸ್ತೆ ಬಳಕೆದಾರರಲ್ಲಿ ಹಾಗೂ ವಾಹನ ಚಾಲಕರಲ್ಲಿ ಸುರಕ್ಷತೆಯ ಬಗ್ಗೆ ಅರಿವನ್ನು ಮೂಡಿಸುವ ಉದ್ಧೇಶದೊಂದಿಗೆ ಹಾವೇರಿ ಜಿಲ್ಲೆ ಗೋಟಗೋಡಿಯ ಕನ್ನಡ ಜಾನಪದ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಡಿ.21 ರಿಂದ ರಸ್ತೆ ಸುರಕ್ಷತಾ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ( ಡಿ.8) ನಡೆದ ರಸ್ತೆ ಸುರಕ್ಷತಾ ಸಪ್ತಾಹದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲಾ ಇಲಾಖೆಯ ಸಹಕಾರದೊಂದಿಗೆ ರಸ್ತೆ ಸುರಕ್ಷತಾ ಸಪ್ತಾಹವನ್ನು ಯಶಸ್ವಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಅಪಘಾಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

 

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿ ಗ್ರಾಮದ ಕನ್ನಡ ಜಾನಪದ ಶಿಕ್ಷಣ ಸಂಸ್ಥೆ ಯು ಹಲವಾರು ರೀತಿಯಲ್ಲಿ ಇಂತಹ ಉತ್ತಮ ಕೆಲಸಗಳನ್ನು ಮಾಡುತ್ತಿದ್ದು, ಅವರ ಕಾರ್ಯ ಶ್ಲಾಘನೀಯ ಎಂದು ಎಂದು ಜಿಲ್ಲಾಧಿಕಾರಿ ಹೇಳಿದರು.
ರಸ್ತೆ ಸುರಕ್ಷತಾ ಸಪ್ತಾಹದ ಪ್ರಮುಖ ಉದ್ದೇಶಗಳು ಕುರಿತು ವಿವರಣೆ ನೀಡಿದ ಅಭಿವೃದ್ಧಿ ತಜ್ಞರಾದ ಪ್ರಕಾಶ್ ಭಟ್ ಅವರು, ರಸ್ತೆ ಬಳಕೆದಾರರಲ್ಲಿ ಸುರಕ್ಷತೆಯ ಬಗ್ಗೆ ಅರಿವನ್ನು ಮೂಡಿಸುವುದು; ವಾಣಿಜ್ಯ ವಾಹನಗಳ ಚಾಲಕರಿಗೆ ಕಣ್ಣಿನ ಪರೀಕ್ಷೆ ನಡೆಸುವುದು ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ಅರಿವನ್ನು ಮೂಡಿಸುವುದಾಗಿದೆ ಎಂದು ತಿಳಿಸಿದರು.
ಈ ಮೇಲಿನ ಮೂರು ಉದ್ದೇಶಗಳು ಮಾತ್ರವಲ್ಲದೇ ರಸ್ತೆ ಜಾಗೃತಿಯ ಬಗ್ಗೆ ಚಿತ್ರಕಲೆಗಳ ಮೂಲಕ ಅರಿವು ಮೂಡಿಸುವುದು; ಬೀದಿನಾಟಕಗಳು, ಜಾಥಾ, ಗೋಡೆಗಳ ಮೇಲೆ ಚಿತ್ರಕಲೆ ಬರೆಸಲಾಗುವುದು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಎಲ್ಇಡಿ ಫಲಕಗಳ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದು, ಹಲವಾರು ಘೋಷವಾಕ್ಯಗಳನ್ನು ಬಳಸುವುದು ಹಾಗೂ ವೇಣುದ್ವನಿ ರೇಡಿಯೋ ಕಾರ್ಯಕ್ರಮಗಳನ್ನು ನಡೆಸುವುದು, ಸ್ಥಳೀಯ ಪತ್ರಿಕೆಗಳ ಮೂಲಕ ಜನರಿಗೆ ಇದರ ಉದ್ದೇಶವನ್ನು ತಲುಪಿಸುವ ಕಾರ್ಯವನ್ನು ಮಾಡುವುದಾಗಿ ಪ್ರಕಾಶ್ ಭಟ್ ಸಭೆಯಲ್ಲಿ ಹೇಳಿದರು.
ಡಿಸೆಂಬರ್ 21 ರಂದು ಜಾಥಾಕ್ಕೆ ಚಾಲನೆ:
ರಸ್ತೆ ಸುರಕ್ಷತಾ ಸಪ್ತಾಹದ ಉದ್ಘಾಟನಾ ಸಮಾರಂಭ ಡಿಸೆಂಬರ್ 21 ಬೆಳಿಗ್ಗೆ 10 ಗಂಟೆಗೆ ಚನ್ನಮ್ಮ ವೃತ್ತದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಚೆನ್ನಮ್ಮ ವೃತ್ತದಿಂದ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಜಾಥಾ ನಡೆಸಲಾಗುವುದು ಎಂದು ವಿವರಿಸಿದರು.
ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಶಶಿಧರ್ ಕುರೇರ್, ಡಿಸಿಪಿ ಚಂದ್ರಶೇಖರ್ ನೀಲಗಾರ, ಹಾವೇರಿ ಜಿಲ್ಲೆ ಗೋಟಗೋಡಿಯ ಕನ್ನಡ ಜಾನಪದ ಶಿಕ್ಷಣ ಸಂಸ್ಥೆಯ ಕನ್ನಡ ಜನಪದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವೇದಾರಾಣಿ ದಾಸನೂರ, ಕನ್ನಡ ಜನಪದ ಶಿಕ್ಷಣ ಸಂಸ್ಥೆಯ ಸದಸ್ಯರಾದ ಪ್ರಕಾಶ್ ದಾಸನೂರ ಹಾಗೂ ಕಾರ್ಯಕ್ರಮ ಸಂಯೋಜಕ ರಾದ ಪ್ರದೀಪ್ ಮೇಲ್ಗಡೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.