ರೈತನಿಂದ ರೂ 100 ಲಂಚ ಪಡೆದ ಪೊಲೀಸ್ ಸಸ್ಪೆಂಡ್

0

ಹೊಸಪೇಟೆ, ಡಿ. 9- ರೈತನಿಂದ ರೂ 100 ಲಂಚ ಪಡೆದ ಆರೋಪದ ಮೇರೆಗೆ ಇಲ್ಲಿನ ಟಿ.ಬಿ. ಡ್ಯಾಂ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಬಸವರಾಜ ಎಂಬುವರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್‌ ಅವರು ಮಂಗಳವಾರ ಅಮಾನತುಗೊಳಿಸಿದ್ದಾರೆ.

ಡಿ. 4ರಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 50ರ ಮಾರ್ಗವಾಗಿ ನಗರದ ಕಡೆಗೆ ರೈತನೊಬ್ಬ ಭತ್ತ ಕಟಾವು ಮಾಡುವ ಯಂತ್ರ ತೆಗೆದುಕೊಂಡು ಹೋಗುತ್ತಿದ್ದ. ಈ ವೇಳೆ ಅಲ್ಲಿನ ಚೆಕ್‌ ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಬಸವರಾಜ, ರೈತನನ್ನು ತಡೆದು ರೂ 100 ತೆಗೆದುಕೊಂಡಿದ್ದಾರೆ.

ಅಲ್ಲಿಂದಲೇ ಹಾದು ಹೋಗುತ್ತಿದ್ದ ಸಾಮಾಜಿಕ ಕಾರ್ಯಕರ್ತ ರವಿ ಎಂಬುವರು ಅದನ್ನು ಗಮನಿಸಿ, ಮೊಬೈಲ್‌ನಲ್ಲಿ ಛಾಯಾಚಿತ್ರ ತೆಗೆದುಕೊಂಡಿದ್ದಾರೆ. ನಂತರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ರೈತನಿಂದ ಪಡೆದಿದ್ದ ಹಣವನ್ನು ಬಸವರಾಜ ವಾಪಸ್‌ ನೀಡಿದ್ದಾರೆ. ಈ ವಿಷಯ ಗೊತ್ತಾದ ನಂತರ ಎಸ್ಪಿ ಅವರು ಬಸವರಾಜ ಅವರನ್ನು ಅಮಾನತುಗೊಳಿಸಿದ್ದಾರೆ. ಎಸ್ಪಿ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ..