ತಮ್ಮ ಮಾತು ಕೇಳಲಿಲ್ಲವೆಂದು ಕೋಪಗೊಂಡಿದ್ದ ತಾಯಿಯೊಬ್ಬರು, 6 ವರ್ಷದ ಮಗನನ್ನೇ ಕುತ್ತಿಗೆಗೆ ವೇಲ್‌ನಿಂದ ಬಿಗಿದು ಕೊಲೆ

0

ಬೆಂಗಳೂರು, ಡಿ 13 – ತಮ್ಮ ಮಾತು ಕೇಳಲಿಲ್ಲವೆಂದು ಕೋಪಗೊಂಡಿದ್ದ ತಾಯಿಯೊಬ್ಬರು, 6 ವರ್ಷದ ಮಗನನ್ನೇ ಕುತ್ತಿಗೆಗೆ ವೇಲ್‌ನಿಂದ ಬಿಗಿದು ಕೊಲೆ ಮಾಡಿರುವ ಘಟನೆ ರಾಜರಾಜೇಶ್ವರಿನಗರದ ಪಟ್ಟಣಗೆರೆಯಲ್ಲಿ ಶನಿವಾರ ನಡೆದಿದೆ.

‘ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ಮನೀಶ್ (6) ಎಂಬಾತನ ಕೊಲೆ ಆಗಿದೆ. ತಂದೆ ತೇಜ್‌ರಾಮ್ ನೀಡಿರುವ ದೂರು ಆಧರಿಸಿ, ಬಾಲಕನ ತಾಯಿ ದೇವಿ (24) ಅವರನ್ನು ಬಂಧಿಸಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.

‘ರಾಜಸ್ಥಾನದ ತೇಜ್‌ರಾಮ್, ನಗರದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದಾರೆ. ಪತ್ನಿ ದೇವಿ, ಮಗ ಮನೀಶ್ ಹಾಗೂ ಎರಡು ತಿಂಗಳ ಮಗುವಿನ ಜೊತೆ ನೆಲೆಸಿದ್ದರು. ತೇಜ್‌ರಾಮ್ ಬೆಳಿಗ್ಗೆ ಮನೆಯಿಂದ ಹೋದರೆ, ರಾತ್ರಿಯೇ ಮರಳುತ್ತಿದ್ದರು. ಅಲ್ಲಿಯವರೆಗೂ ಮಕ್ಕಳನ್ನು ದೇವಿ ಅವರು ನೋಡಿಕೊಳ್ಳುತ್ತಿದ್ದರು.’

ಮಗುವಿಗೆ ಹೊಡೆದಿದ್ದ ಮನೀಶ್: ‘ಶನಿವಾರ ಮಧ್ಯಾಹ್ನ ಮಗುವಿನ ಜೊತೆ ಮನೀಶ್ ಆಟವಾಡುತ್ತಿದ್ದ. ಅದೇ ವೇಳೆಯೇ ಮಗುವಿಗೆ ಹೊಡೆದಿದ್ದ. ಅದನ್ನು ನೋಡಿದ್ದ ತಾಯಿ, ಹೊಡೆಯಬೇಡವೆಂದು ಬುದ್ದಿವಾದ ಹೇಳಿದ್ದರು. ಅಷ್ಟಾದರೂ ಮನೀಶ್, ಪುನಃ ಮಗುವಿಗೆ ಹೊಡೆಯಲಾರಂಭಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಮನೀಶ್ ವರ್ತನೆಯಿಂದ ಕೋಪಗೊಂಡಿದ್ದ ದೇವಿ, ತಮ್ಮ ಮಾತು ಕೇಳುತ್ತಿಲ್ಲವೆಂದು ಹೇಳಿ ಥಳಿಸಿದ್ದರು. ಆತನನ್ನು ಮಲಗುವ ಕೊಠಡಿಗೆ ಕರೆದೊಯ್ದು ಹೊಡೆದಿದ್ದರು. ಮನೀಶ್, ಚೀರಾಡಲಾರಂಭಿಸಿದ್ದ. ಮತ್ತೆ ಕೋಪಗೊಂಡ ದೇವಿ, ಮನೀಶ್‌ನ ಕುತ್ತಿಗೆ ತಮ್ಮ ವೇಲ್‌ ಸುತ್ತಿ ಬಿಗಿದಿದ್ದರು. ಉಸಿರಾಡಿಸಲು ಸಾಧ್ಯವಾಗದೇ ಕೆಲ ಕ್ಷಣಗಳಲ್ಲೇ ಬಾಲಕ, ಪ್ರಜ್ಞೆ ತಪ್ಪಿ ಬಿದ್ದಿದ್ದ’ ಎಂದೂ ತಿಳಿಸಿದರು.

‘ಮಗ ಮಾತನಾಡದಿದ್ದರಿಂದ ಗಾಬರಿಗೊಂಡ ದೇವಿ. ಪತಿ ತೇಜ್‌ರಾಮ್‌ ಮೊಬೈಲ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಮನೆಗೆ ಬಂದಿದ್ದ ತೇಜ್‌ರಾಮ್ ಹಾಗೂ ಅವರ ಸ್ನೇಹಿತರು, ಬಾಲಕನನ್ನು ಬಿಜಿಎಸ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಸ್ಥಳದಲ್ಲೇ ಮನೀಶ್ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರು’ ಎಂದೂ ಪೊಲೀಸರು ಮಾಹಿತಿ ನೀಡಿದರು.

‘ತಲೆನೋವು ಬಂದಿದ್ದ ವೇಳೆಯೇ ಮನೀಶ್ ಗಲಾಟೆ ಮಾಡುತ್ತಿದ್ದ. ನನ್ನ ಮಾತು ಕೇಳಿಲ್ಲ. ಅದೇ ಕೋಪದಲ್ಲೇ ಆತನ ಕುತ್ತಿಗೆಗೆ ವೇಲ್‌ನಿಂದ ಬಿಗಿದಿದ್ದೆ’ ಎಂಬುದಾಗಿ ದೇವಿ ಹೇಳಿಕೆ ನೀಡಿದ್ದಾರೆ’ ಎಂದೂ ವಿವರಿಸಿದರು.