ವಿಧಾನ ಪರಿಷತ್‌ನಲ್ಲಿ ಗದ್ದಲ

0

ಬೆಂಗಳೂರು, ಡಿ. 15- ಗೋಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ, ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಸೇರಿದಂತೆ ಕೆಲ ವಿಷಯಗಳ ಮಂಡನೆ ದೃಷ್ಟಿಯಿಂದ ಕರೆದಿದ್ದ ವಿಧಾನಪರಿಷತ್‌ನ ಒಂದು ದಿನದ ಅಧಿವೇಶನ ಮಂಗಳವಾರ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಸಭಾಪತಿ ಪೀಠದಲ್ಲಿ ಸಭಾಪತಿ ಆಸೀನರಾಗುವುದಕ್ಕಿಂತ ಮೊದಲೇ ಉಪ ಸಭಾಪತಿ ಧರ್ಮೇಗೌಡ ಅವರನ್ನು ಕುಳ್ಳಿರಿಸಿ, ಕಲಾಪ ನಡೆಸಲು ಆಡಳಿತ ರೂಢ ಬಿಜೆಪಿ ಮುಂದಾಗಿದೆ. ಈ ಸಂದರ್ಭದಲ್ಲಿ ಕಲಾಪದ ಕಾರ್ಯಸೂಚಿ ಕಿತ್ತೆಸೆದು ಘೋಷಣೆ. ಕೈ ಕೈ ಮಿಲಾವಣೆ, ಅವಾಚ್ಯ ಶಬ್ದಗಳಿಂದ ನಿಂದನೆ, ನೂಕಾಟ, ತಳ್ಳಾಟ ನಡೆಯಿತು.

ಈ ವೇಳೆ, ಪೀಠದ ಬಳಿಗೆ ದೌಡಾಯಿಸಿದ ಕಾಂಗ್ರೆಸ್‌ ಸದಸ್ಯರು ಉಪ ಸಭಾಪತಿ ಅವರನ್ನು ಪೀಠದಿಂದ ದರದರನೆ ಎಳೆದು ಕೆಳಗೆ ಹಾಕಿದರು. ಇನ್ನೊಂದೆಡೆ ಬಿಜೆಪಿಯ ನಾರಾಯಣಸ್ವಾಮಿ ಮತ್ತಿತರರ ಸದಸ್ಯರು ಧರ್ಮೇಗೌಡರ ನೆರವಿಗೆ ಬಂದಿದ್ದು, ಪೀಠದಿಂದ ಕೆಳಗಿಳಿಸದಂತೆ ತಡೆ ದಿದ್ದಾರೆ. ಈ ವೇಳೆ ಎರಡೂ ಪಕ್ಷಗಳ ಸದಸ್ಯ ನಡುವೆ ಮಾತಿನ ಚಕಮಕಿ, ನೂಕಾಟ, ತಳ್ಳಾಟ ನಡೆದಿದೆ.

ಧರ್ಮೇಗೌಡ ಅವರನ್ನು ತಳ್ಳಿ ಕೆಳಗಿಳಿಸಿದ ಕಾಂಗ್ರೆಸ್ ಸದಸ್ಯರು, ತಮ್ಮ ಪಕ್ಷದ ಸದಸ್ಯ ಚಂದ್ರಶೇಖರ ಪಾಟೀಲ ಅವ ರನ್ನು ಸಭಾಪತಿ ಸ್ಥಾನ ದಲ್ಲಿ ಕುಳ್ಳಿರಿಸಿದರು. ಅಷ್ಟೇ ಅಲ್ಲ, ಪೀಠದ ಎರಡೂ ಬದಿಗಳಲ್ಲಿ ಎಂ. ನಾರಾಯಣಸ್ವಾಮಿ ಮತ್ತು ಇತರ ಸದಸ್ಯರು ತಡೆಯಾಗಿ ನಿಂತು, ಸಭಾಪತಿ ಅವರು ಪೀಠಕ್ಕೆ ಬರುವಂತೆ ಮಾಡಿದರು. ಅಲ್ಲದೆ, ಸಭಾಪತಿ ಪೀಠದ ಮುಂಭಾಗದಲ್ಲಿದ ದಾಖಲೆಗಳನ್ನು ಕಿತ್ತೆಸೆದರು.

ಇದೇ ಕೆಲವು ಕಾಂಗ್ರೆಸ್‌ ಸದಸ್ಯರು ಸಭಾಪತಿ ಪೀಠದ ಹಿಂಭಾಗದಲ್ಲಿರುವ ಪ್ರವೇಶ ದ್ವಾರವನ್ನು ಬಲವಂತವಾಗಿ ತೆಗೆದು ಸಭಾಪತಿಯವರನ್ನು ಪೀಠಕ್ಕೆ ಕರೆದುಕೊಂಡು ಬರಲು ಮುಂದಾದರು. ಅದಕ್ಕೆ ಬಿಜೆಪಿ ಕೆಲವು ಸದಸ್ಯರು ತಡೆಯೊಡ್ಡಿದ ಪ್ರಸಂಗವೂ ನಡೆಯಿತು. ಕೆಲಹೊತ್ತು ನಡೆದ ಗದ್ದಲ, ಗೊಂದಲದ ವಾತಾವರಣ, ಪರಿಷತ್‌ನಲ್ಲಿ ಏನು ನಡೆಯುತ್ತದೆ ಎಂದೇ ಗೊತ್ತಾಗದಂಥ ಸ್ಥಿತಿ ನಿರ್ಮಾಣವಾಯಿತು.

ಗದ್ದಲ ನಡೆಯುತ್ತಿರುವ ಮಧ್ಯೆಯೇ ಮಾರ್ಷಲ್‌ಗಳ ರಕ್ಷಣೆಯಲ್ಲಿ ಪೀಠಕ್ಕೆ ಬಂದ ಸಭಾಪತಿ ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು.

ಕುಸಿದ ಧರ್ಮೇಗೌಡ, ಗದ್ಗದಿತರಾದ ಹೊರಟ್ಟಿ

ಬಿಜೆಪಿ–ಕಾಂಗ್ರೆಸ್ ಸದಸ್ಯರ ನೂಕಾಟದ ನಡುವೆ ಧರ್ಮೇಗೌಡ ಅವರು ಕುಸಿದರು. ಈ ವೇಳೆ ಧರ್ಮೇಗೌಡ ಅವರನ್ನು ಬಸವರಾಜ ಹೊರಟ್ಟಿ ಕುಳ್ಳಿರಿಸಿ ಸಾಂತ್ವನ ಹೇಳಿದರು. ಕುರ್ಚಿಗಾಗಿ ಸದಸ್ಯರ ಪರಸ್ಪರ ವಾಗ್ವಾದವನ್ನು ಕುಳಿತಲ್ಲೇ ವೀಕ್ಷಿಸಿದ ಹೊರಟ್ಟಿ ಗದ್ಗದಿತರಾಗಿರುವುದು ಕಂಡುಬಂತು.

ಬಾಗಿಲಿಗೆ ಒದ್ದ ನಜೀರ್ ಅಹ್ಮದ್, ಹರಿಪ್ರಸಾದ್

ಸಭಾಪತಿಗಳು ಸದನಕ್ಕೆ ಬಾರದಂತೆ ಆಡಳಿತ ಪಕ್ಷದ ಸದಸ್ಯರು ಬಾಗಿಲನ್ನು ಲಾಕ್ ಮಾಡಿದ ಘಟನೆಯೂ ನಡೆದಿದೆ. ಕಾಂಗ್ರೆಸ್‌ನ ನಜೀರ್ ಅಹ್ಮದ್ ಮತ್ತು ಬಿ.ಕೆ ಹರಿಪ್ರಸಾದ್ ಬಾಗಿಲನ್ನು ಒದ್ದು ತೆಗೆಯಲು ಮುಂದಾದರು. ವೈ.ಎ. ನಾರಾಯಣ ಸ್ವಾಮಿ, ಆಯನೂರು ಮಂಜುನಾಥ್, ಮಹಾಂತೇಶ, ಅರುಣ್ ಶಹಾಪೂರ, ಸಚಿವರಾದ ಮಾಧುಸ್ವಾಮಿ, ಸವದಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್‌ನ ವಿಪ್ ಎಂ.ನಾರಾಯಣ ಸ್ವಾಮಿ ಸೇರಿದಂತೆ ಸದಸ್ಯರು ಪರಸ್ಪರ ಎಳೆದಾಡಿಕೊಂಡರು.

ಉಪ ಸಭಾಪತಿ ಧರ್ಮೇಗೌಡರಿಗೆ ಕಾಂಗ್ರೆಸ್ ಸದಸ್ಯರು ಮುತ್ತಿಗೆ ಹಾಕಲು ಹೋಗುತ್ತಿದ್ದಂತೆ ಅವರ ಸುತ್ತ ಆವರಿಸಿದ ಬಿಜೆಪಿ ಸದಸ್ಯರು ಗಲಾಟೆ ಮಾಡಿದರು.