ಶಿಕ್ಷಕರ ಸಂಘದ ಚುನಾವಣೆ

0

ಬೆಳಗಾವಿ, ಡಿ. 15 – ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2020–25ನೇ ಸಾಲಿನ ತಾಲ್ಲೂಕು ಕಾರ್ಯಕಾರಿ ಸಮಿತಿ ಆಯ್ಕೆಗೆ ಮಂಗಳ ವಾರ ಮತದಾನ ನಡೆಯಿತು.

ಗ್ರಾಮೀಣ ಸಮಿತಿಗೆ ಇಲ್ಲಿನ ಚವಾಟ ಗಲ್ಲಿಯ ಮರಾಠಿ ಸರ್ಕಾರಿ ಶಾಲೆ ಮತ್ತು ನಗರ ಸಮಿತಿಗೆ ವಿಶ್ವೇಶ್ವರಯ್ಯ ನಗರದ ಸರ್ಕಾರಿ ಶಾಲೆಯಲ್ಲಿ ಬೆಳಿಗ್ಗೆ 7.30ರಿಂದ ಸಂಜೆ 4ರವರೆಗೆ ಮತದಾನ ಪ್ರಕ್ರಿಯೆ ನಡೆಯಿತು.

ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡು ಹಕ್ಕು ಚಲಾಯಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಶಿಕ್ಷಕರು ಕೋವಿಡ್–19 ಭೀತಿಯಲ್ಲೂ ಅಂತರ ಕಾಯ್ದುಕೊಳ್ಳುವದನ್ನು ಮರೆತರು. ಅಲ್ಲಲ್ಲಿ ಗುಂಪು ಗುಂಪಾಗಿ ನಿಂತು ಚರ್ಚಿಸುತ್ತಿದ್ದುದು. ಕಾರ್ಯ ಕಾರಿ ಸಮಿತಿಗೆ ಆಯ್ಕೆ ಬಯಸಿದ್ದ ಶಿಕ್ಷಕರ ಪೆನಲ್‌ನವರು ಮತದಾರರ ಮನವೊಲಿಕೆಗೆ ಕೊನೆ ಕ್ಷಣದ ಕಸರತ್ತು ನಡೆ ಸುತ್ತಿದ್ದ ದೃಶ್ಯ ಕಂಡು ಬಂತು.

ಗ್ರಾಮೀಣ ಸಮಿತಿಯ 20 ಪುರುಷ ಹಾಗೂ 10 ಮಹಿಳಾ ಮೀಸಲು ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಗುರುಸ್ಪಂದನ ಹಾಗೂ ಪ್ರಗತಿಪರ ಪೆನಲ್‌ಗಳ ನಡುವೆ ತೀವ್ರ ಹಣಾಹಣಿ ಕಂಡು ಬಂದಿತು. ಪುರುಷರ ವಿಭಾಗದಲ್ಲಿ 40 ಹಾಗೂ ಮಹಿಳಾ ಮೀಸಲು ಸ್ಥಾನಗಳಿಗೆ 20 ಮಂದಿ ಸ್ಪರ್ಧಿಸಿದ್ದರು. 1,496 ಮತದಾರರ ಪೈಕಿ 1,421 ಮತದಾರರು ಹಕ್ಕು ಚಲಾಯಿಸಿದರು.

ನಗರ ವಿಭಾಗದಲ್ಲಿ ಸಾಮಾನ್ಯ 9 ಹಾಗೂ ಮಹಿಳಾ ಮೀಸಲಲ್ಲಿ 5 ಸ್ಥಾನಗಳಿಗೆ ಕ್ರಮವಾಗಿ 19 ಮತ್ತು 10 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 698 ಮತದಾರರ ಪೈಕಿ 671 ಮಂದಿ ಹಕ್ಕು ಚಲಾಯಿಸಿದರು.

ಚುನಾವಣೆ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಇಲಾಖೆಯಿಂದ ಅನ್ಯ ಕಾರ್ಯನಿಮಿತ್ತ ರಜೆ ಘೋಷಿಸಲಾಗಿತ್ತು. ಈ ಚುನಾವಣೆಯಲ್ಲಿ 50 ಶಿಕ್ಷಕರಿಗೆ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗುತ್ತಿದೆ. ಜಿಲ್ಲಾ ಹಾಗೂ ರಾಜ್ಯಮಟ್ಟದ ಪದಾಧಿಕಾರಿಗಳ ಆಯ್ಕೆಗೆ ಡಿ. 29ರಂದು ಚುನಾವಣೆ ನಿಗದಿಯಾಗಿದೆ.