ಸಿಐಡಿ ಡಿವೈಎಸ್ಪಿ ಆತ್ಮಹತ್ಯೆ

0

ಬೆಂಗಳೂರು, ಡಿ. 17 – ಸಿಐಡಿ ಡಿವೈಎಸ್ಪಿ ವಿ. ಲಕ್ಷ್ಮಿ (33) ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೋಣನಕುಂಟೆ ನಿವಾಸಿ ಆಗಿದ್ದ ಲಕ್ಷ್ಮಿ, ಮೂರು ದಿನಗಳ ಹಿಂದಷ್ಟೇ ನಾಗರಬಾವಿಯಲ್ಲಿರುವ ಸ್ನೇಹಿತೆಯೊಬ್ಬರ ಮನೆಗೆ ಬಂದಿದ್ದರು. ಅದೇ ಮನೆಯ ಕೊಠಡಿಯಲ್ಲಿ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ…

‘2014ನೇ ಬ್ಯಾಚ್‌ ಅಧಿಕಾರಿಯಾಗಿದ್ದ ಲಕ್ಷ್ಮಿ, 2017ರಿಂದ ಸಿಐಡಿಯಲ್ಲಿ ಕೆಲಸ ಮಾಡುತ್ತಿದ್ದರು. ಹೈದರಾಬಾದ್‌ನಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ನವೀನ್ ಎಂಬುವರನ್ನು ಪ್ರೀತಿಸಿ 2012ರಲ್ಲಿ ಮದುವೆಯಾಗಿದ್ದರು. ಆದರೆ, ಎರಡು ವರ್ಷಗಳಿಂದ ದಂಪತಿ ನಡುವೆ ಜಗಳ ಶುರುವಾಗಿತ್ತು. ಅದೇ ಕಾರಣಕ್ಕೆ ಲಕ್ಷ್ಮಿ ಅವರು ನೊಂದಿದ್ದರೆಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ ಎಂದೂ ಅಧಿಕಾರಿ ವಿವರಿಸಿದರು.

‘ಸ್ನೇಹಿತೆ ಹಾಗೂ ಸಂಬಂಧಿಕರ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೊಠಡಿಯಲ್ಲಿ ಯಾವುದೇ ಮರಣ ಪತ್ರವೂ ಸಿಕ್ಕಿಲ್ಲ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದೂ ಅವರು ಹೇಳಿದರು.

ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವವಳು ಅಲ್ಲ. ಈ ಬಗ್ಗೆ ಸಂಪೂರ್ಣ ತನಿಖೆ ಆಗಬೇಕೆಂದು ಲಕ್ಷ್ಮಿ ತಂದೆ ಒತ್ತಾಯಿಸಿದ್ದಾರೆ.