ಪಾಂಡವಪುರದಲ್ಲಿ ಸ್ಪರ್ಧೆಗಿಳಿದ ರೈತ ಸಂಘದ ಹಿಂದಿನ ಉದ್ದೇಶವೇನು?

ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯಾಗಿದ್ದು, ಜೆಡಿಎಸ್ ಭದ್ರಕೋಟೆಯನ್ನು ಕಾಂಗ್ರೆಸ್ ಛಿದ್ರ ಮಾಡುವ ಹಠದಲ್ಲಿದ್ದರೆ ಬಿಜೆಪಿ ಅಸ್ತಿತ್ವ ಕಂಡುಕೊಳ್ಳಲು ಉತ್ಸಾಹದಲ್ಲಿದೆ. ಇದೆಲ್ಲದರ ನಡುವೆ ರೈತ ಸಂಘವೂ ಗ್ರಾಮ ಪಂಚಾಯಿತಿ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದ್ದು, ಇದು ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಿ ಎಂಬ ಮಾತುಗಳು ಕೇಳಿ ಬರುತ್ತಿವೆ.

0

ಮಂಡ್ಯ: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯಾಗಿದ್ದು, ಜೆಡಿಎಸ್ ಭದ್ರಕೋಟೆಯನ್ನು ಕಾಂಗ್ರೆಸ್ ಛಿದ್ರ ಮಾಡುವ ಹಠದಲ್ಲಿದ್ದರೆ ಬಿಜೆಪಿ ಅಸ್ತಿತ್ವ ಕಂಡುಕೊಳ್ಳಲು ಉತ್ಸಾಹದಲ್ಲಿದೆ. ಇದೆಲ್ಲದರ ನಡುವೆ ರೈತ ಸಂಘವೂ ಗ್ರಾಮ ಪಂಚಾಯಿತಿ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದ್ದು, ಇದು ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಿ ಎಂಬ ಮಾತುಗಳು ಕೇಳಿ ಬರುತ್ತಿವೆ.

ರೈತ ಸಂಘವನ್ನು ಸಂಘಟಿಸುವ ಪ್ರಯತ್ನ

ಹಿಂದೆ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಿಂದ ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಅವರ ನಿಧನದ ನಂತರ ಈ ಕ್ಷೇತ್ರದಲ್ಲಿ ಸಿ.ಎಸ್.ಪುಟ್ಟರಾಜು ಗೆಲುವು ಪಡೆಯುವುದರೊಂದಿಗೆ ಜೆಡಿಎಸ್ ಪಾಲಾಗಿತ್ತು.

ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಕೆ.ಎಸ್.ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಮತ್ತೊಮ್ಮೆ ಸ್ಪರ್ಧಿಸುವ ಬಯಕೆ ಹೊಂದಿರುವುದರಿಂದ ಈಗ ನಡೆಯುತ್ತಿರುವ ಗ್ರಾಪಂ ಚುನಾವಣೆಯಲ್ಲಿ ರೈತ ಸಂಘದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸುವ ಪ್ರಯತ್ನಕ್ಕೆ ಮುಂದಾಗಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲದೆ ಆ ಮೂಲಕ ಗ್ರಾಮೀಣ ಮಟ್ಟದಲ್ಲಿ ರೈತ ಸಂಘವನ್ನು ಸಂಘಟಿಸುವುದು ಕೂಡ ಮುಖ್ಯ ಉದ್ದೇಶವಾಗಿದೆ.

ಅಮೇರಿಕಾದಿಂದ ಬಾರದ ದರ್ಶನ್ ಪುಟ್ಟಣ್ಣಯ್ಯ

ಗ್ರಾಪಂ ಚುನಾವಣೆಗೆ ಪೂರ್ವ ಸಿದ್ಧತೆಯನ್ನು ಕಳೆದ ಒಂದೆರಡು ತಿಂಗಳ ಹಿಂದಿನಿಂದಲೇ ತಯಾರಿಯನ್ನು ರೈತ ಸಂಘದ ಮುಖಂಡರು ಮಾಡಿಕೊಂಡು ಬಂದಿದ್ದು, ಚುನಾವಣೆ ವೇಳೆಗೆ ದರ್ಶನ್ ಪುಟ್ಟಣ್ಣಯ್ಯ ಆಗಮಿಸಿ ಚುನಾವಣೆಯ ಮುಂದಾಳತ್ವ ವಹಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆಯಾದರೂ ಅವರು ಇನ್ನೂ ಕೂಡ ಅಮೇರಿಕಾದಿಂದ ಬಾರದ ಕಾರಣ ರೈತ ಸಂಘದ ಸ್ಥಿತಿ ಸದ್ಯಕ್ಕೆ ನಾವಿಕನಿಲ್ಲದ ಹಡಗಿನಂತಾಗಿದೆ.

ಈ ಬಾರಿ ರೈತಸಂಘ ತನ್ನ ಹಿಂದಿನ ದೋಸ್ತಿ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳದೆ, ಎಲ್ಲ್ಲ ಕ್ಷೇತ್ರಗಳಲ್ಲೂ ಏಕಾಂಗಿಯಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಜ್ಜಾಗಿರುವುದು ಕಂಡು ಬಂದಿದೆ.

ಚುನಾವಣೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿಗೂ ಪ್ರತಿಷ್ಠೆ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ರೈತ ಸಂಘ ಸ್ವಲ್ಪ ಮಟ್ಟಿಗೆ ಪ್ರಾಬಲ್ಯವನ್ನುಳಿಸಿಕೊಂಡಿದೆ. ಹೀಗಾಗಿ ಇಲ್ಲಿಂದಲೇ ಅದರಲ್ಲೂ ಗ್ರಾಮೀಣ ಮಟ್ಟದಿಂದಲೇ ರೈತ ಸಂಘವನ್ನು ಗಟ್ಟಿಗೊಳಿಸಲು ತಂತ್ರ ಆರಂಭಿಸಲಾಗಿದೆ. ಇದೀಗ ಗ್ರಾಮ ಪಂಚಾಯಿತಿ 412 ಸದಸ್ಯರ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ತಾಲೂಕಿನಲ್ಲಿ 24 ಗ್ರಾಮ ಪಂಚಾಯಿತಿಗಳಿವೆ.

ಇದರಲ್ಲಿ ಅವಧಿ ಮುಗಿಯದ ಮೇಲುಕೋಟೆ ಗ್ರಾಮ ಪಂಚಾಯಿತಿ ಹೊರತುಪಡಿಸಿ ಉಳಿದ 23 ಗ್ರಾಮ ಪಂಚಾಯಿತಿಗಳಿಗೆ ಡಿ.27ರಂದು ಭಾನುವಾರ ಚುನಾವಣೆ ನಡೆಯಲಿದೆ. ಇದೀಗ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಹಾಗೂ ರೈತ ಸಂಘವು ಪ್ರಾಬಲ್ಯ ಸಾಧಿಸಲು ಮುಂದಾಗಿರುವುದು ಗೋಚರಿಸಿದೆ.

ರೈತ ಸಂಘ ಗಟ್ಟಿಯಾಗಿ ನೆಲೆಯೂರತ್ತಾ ?

ಪಾಂಡವಪುರ ತಾಲೂಕಿನಲ್ಲಿ ಬಿಜೆಪಿಗೆ ಯಾವುದೇ ನೆಲೆ ಇಲ್ಲ. ಆದರೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಂಡ ಬಳಿಕ ಮಂಡ್ಯದಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಲು ಬಿಜೆಪಿ ಮುಂದಾಗಿದೆ. ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ಇದೀಗ ಹಂತ ಹಂತವಾಗಿ ಸಂಘಟಿತ ಶಕ್ತಿಯಾಗಿ ರೂಪುಗೊಳ್ಳುತ್ತಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಸ್ವಲ್ಪ ಮಟ್ಟಿಗೆ ಭಯವನ್ನುಂಟು ಮಾಡಿದೆ.

ಇಲ್ಲಿ ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಸ್ಪರ್ಧೆ ಮಾಡಲು ಸಿದ್ದಗೊಂಡಿದ್ದು, 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ತಮ್ಮ ಪಕ್ಷದ ಬೆಂಬಲಿಗ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ ತೆನೆ ನಾಯಕರು. ಆದರೆ ಜೆಡಿಎಸ್‌ಗೆ ಸೆಡ್ಡುಹೊಡೆಯಲೇ ಬೇಕೆಂಬ ಹಠದಲ್ಲಿ ರೈತಸಂಘವಿರುವುದು ಎದ್ದು ಕಾಣುತ್ತದೆ. ಆದರೆ ಇಲ್ಲಿ ರೈತ ಸಂಘ ಪಾರಮ್ಯ ಸಾಧಿಸುತ್ತಾ ಎಂಬುದಕ್ಕೆ ಡಿ.27ರವರೆಗೆ ಕಾಯುವುದು ಅನಿವಾರ್ಯವಾಗಿದೆ.