ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿ

0

ಬೆಳಗಾವಿ, ಡಿ. 20- ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಆದೇಶ ಹೊರಡಿಸಿದ್ದಾರೆ.

ಮೊದಲ ಹಂತದ ಚುನಾವಣೆ ಡಿ. 22ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಸಂಜೆ 5ರಿಂದಲೇ ಈ ಆದೇಶ ಅನ್ವಯವಾಗಲಿದ್ದು, ಡಿ. 22 ರ ಸಂಜೆ 5ರವರೆಗೆ ಇರಲಿದೆ. 2ನೇ ಹಂತದ ಚುನಾವಣೆ ಡಿ.27ರಂದು ಜರುಗಲಿದ್ದು, ಡಿ.25ರ ಸಂಜೆ 5ರಿಂದ ಡಿ.27ರ ಸಂಜೆ 5ರವರೆಗೆ ಪ್ರತಿಬಂಧಕಾಜ್ಞೆ ಜಾರಿಯಲ್ಲಿರಲಿದೆ. ಸಿಆರ್‌ಪಿಸಿ 1973ರ ಕಲಂ 144ರಲ್ಲಿ ಕೆಲವು ಷರತ್ತುಗಳನ್ನು ವಿಧಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದು, ಮೆರವಣಿಗೆ, ಸಭೆ–ಸಮಾರಂಭ ನಡೆಸುವುದನ್ನು ನಿಷೇಧಿಸಿದೆ. ಅಭ್ಯ ರ್ಥಿಗಳು ಅಥವಾ ಬೆಂಬಲಿಗರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಬಹುದು. ಆದರೆ, ಆ ಸಮಯದಲ್ಲೂ ಐವರಿಗಿಂತ ಹೆಚ್ಚಿನವರು ಸೇರುವಂತಿಲ್ಲ. ಮತದಾರರಲ್ಲದವರು ಆ ಚುನಾವಣಾ ಕ್ಷೇತ್ರದಿಂದ ಹೊರಗೆ ಹೋಗಬೇಕು. ಶಸ್ತ್ರ, ಬಡಿಗೆ, ಭರ್ಜಿ, ಖಡ್ಗ, ಗದೆ, ಬಂದೂಕು, ಚೂರಿ, ದೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯ ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವು ದನ್ನು ನಿಷೇಧಿಸಲಾಗಿದೆ. ಎಸೆಯಬಹುದಾದ ಕಲ್ಲುಗಳನ್ನೂ ಸಾಗಿಸುವಂತಿಲ್ಲ.

ಪ್ರತಿಕೃತಿ ಪ್ರದರ್ಶನ ಪ್ರತಿಬಂಧಿಸಲಾಗಿದೆ. ಘೋಷಣೆ ಕೂಗುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು ಮೊದಲಾದ ಸಾರ್ವಜನಿಕ ಸಭ್ಯತೆ ಮತ್ತು ನೀತಿ ಆಕ್ರಮಿಸಬಹುದಾದ ಕೃತ್ಯಗಳನ್ನು ನಿಷೇಧಿಸಲಾಗಿದೆ. ಪ್ರಚೋದಿಸುವುದು ಸೇರಿದಂತೆ ಸಾರ್ವಜನಿಕ ಗಾಂಭೀರ್ಯ ಮತ್ತು ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗುವಂತಿಲ್ಲ. ಆದಾಗ್ಯೂ ಕಾನೂನು ಉಲ್ಲಂಘಿಸಿ ಮಾರಕಾಸ್ತ್ರ ಹಾಗೂ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿರುವುದು ಕಂಡುಬಂದಲ್ಲಿ ಮುಟ್ಟುಗೋಲು ಹಾಕಿಕೊಂಡು ಅಂತಹ ವ್ಯಕ್ತಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಶವಸಂಸ್ಕಾರ, ಮದುವೆ ಅಥವಾ ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ. ಆದರೆ, ನೀತಿಸಂಹಿತೆ ಉಲ್ಲಂಘನೆ ಆಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಬರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಈ ಆದೇಶವು ಮತದಾನ ಸಿಬ್ಬಂದಿ, ಅಧಿಕಾರಿ, ಪೊಲೀಸ್ ಅಧಿಕಾರಿ ಹಾಗೂ ಚುನಾವಣಾ ಕಾರ್ಯನಿರತರಿಗೆ ಮತ್ತು ಒಬ್ಬೊಬ್ಬರಾಗಿ ತೆರಳಿ ಮತದಾನ ಮಾಡುವವರಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಹಿರಂಗ ಪ್ರಚಾರಕ್ಕೆ ಇಂದು (ಭಾನುವಾರ) ಸಂಜೆ ತೆರೆ ಬೀಳಲಿದೆ. ಸೋಮವಾರದಿಂದ ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದಾಗಿದೆ. ಅಭ್ಯರ್ಥಿಗಳು, ಕುಟುಂಬದವರು ಹಾಗೂ ಬೆಂಬಲಿಗರು ಮತದಾರರ ಮನವೊಲಿಕೆಗಾಗಿ ಕೊನೆ ಕ್ಷಣದ ಕಸರತ್ತುಗಳನ್ನು ನಡೆಸುತ್ತಿದ್ದಾರೆ.