ರಾತ್ರಿ 10ರ ನಂತರ ಮದ್ಯದಂಗಡಿ ಬಂದ್

0

ಕೋಲಾರ, ಡಿ. 23- ‘ಕೋವಿಡ್‌ ಎರಡನೇ ಅಲೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಿರುವುದು ಸ್ವಾಗತಾರ್ಹ. ರಾತ್ರಿ 10 ಗಂಟೆ ನಂತರ ಮದ್ಯದಂಗಡಿ ತೆರೆದರೆ ನಿರ್ದಾಕ್ಷಿಣ್ಯವಾಗಿ ಅವರ ಪರವಾನಗಿ ರದ್ದು ಪಡಿಸುತ್ತೇವೆ’ ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ಎಚ್ಚರಿಕೆ ನೀಡಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ ಕರ್ಫ್ಯೂ ಜಾರಿಯಲ್ಲಿ ಅಬಕಾರಿ ಇಲಾಖೆ ಪಾತ್ರ ನಿರ್ಣಾಯಕ. ಇಲಾಖೆಯು ಮದ್ಯದ ವಹಿವಾಟಿನ ನಿಯಮ ಸಡಿಲಗೊಳಿಸಿದರೆ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಬಹುದು ಎಂದರು.

‘ರಾತ್ರಿ ಕರ್ಫ್ಯೂ ಸಂಬಂಧ ಇಲಾಖೆ ಆಯುಕ್ತರು ಮತ್ತು ಜಿಲ್ಲೆಗಳ ಉಪ ಆಯುಕ್ತರಿಗೆ ಮಾಹಿತಿ ನೀಡಲಾಗಿದೆ. ರಾತ್ರಿ 10ರ ನಂತರ ಮದ್ಯ ದಂಗಡಿ ಬಂದ್‌ ಮಾಡಿಸಲು ಇಲಾಖೆ ಸಿಬ್ಬಂದಿಗೆ ನಿರ್ದೇಶನ ನೀಡುವಂತೆ ಸೂಚಿಸಿದ್ದೇವೆ. ಕೋವಿಡ್‌ ಮಾರ್ಗಸೂಚಿ ಪಾಲನೆ ಸಂಬಂಧ ಇ–ಮೇಲ್‌ ಮೂಲಕ ಮದ್ಯದಂಗಡಿ ಮಾಲೀಕರಿಗೂ ಸಂದೇಶ ಕಳುಹಿಸಲಾಗಿದೆ. ಎಲ್ಲಾ ಬಗೆಯ ಮದ್ಯದಂಗಡಿಗಳನ್ನು ರಾತ್ರಿ 10ರ ನಂತರ ಕಡ್ಡಾಯವಾಗಿ ಬಂದ್ ಮಾಡಬೇಕು ಎಂದು ಸಚಿವ ನಾಗೇಶ್ ಹೇಳಿದರು.