ಬೇಸಾಯದಲ್ಲಿ ಆಧುನಿಕ ಪದ್ಧತಿ ಅಳವಡಿಸಿಕೊಳ್ಳಲು ಜಿಲ್ಲಾಧಿಕಾರಿ ಹಿರೇಮಠ ಸಲಹೆ

0
ಬೆಳಗಾವಿ, ಡಿ.23: ಪ್ರಸ್ತುತ ಸಂದರ್ಭದಲ್ಲಿ ಲಭ್ಯವಿರುವ ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಆಧುನಿಕ ರೀತಿಯಲ್ಲಿ  ಕೃಷಿ ಮಾಡುವ ಮೂಲಕ ಲಾಭ ಗಳಿಸಬಹುದು. ರೈತರು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ಸೇರ್ಪಡೆ ಮತ್ತು ಕಿರು ಮಾರುಕಟ್ಟೆ ವಿಭಾಗದಿಂದ ಬೆಳಗಾವಿ ಕೃಷಿ ಇಲಾಖೆ ಸಭಾಭವನದಲ್ಲಿ ಬುಧವಾರ(ಡಿ.23) ಏರ್ಪಡಿಸಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಬೆಳೆದ ಬೆಳೆಗಳಿಗೆ ಉತ್ತಮ ದರ ಒದಗಿಸುವುದು ಸೇರಿದಂತೆ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು..
ಸಕಾಲದಲ್ಲಿ ಸಾಲ ಮರುಪಾವತಿಸಿದ ಗ್ರಾಹಕರು, ಸಾಲ ವಸೂಲಾತಿಯಲ್ಲಿ ಸಾಧನೆ ಮಾಡಿದ ಬ್ಯಾಂಕಿನ ನೌಕರರು, ಅತ್ಯುತ್ತಮ ಬೆಳೆ ಪಡೆದು ಕೃಷಿಯಲ್ಲಿ ಸಾಧನೆ ಮಾಡಿದ ಪ್ರಗತಿಪರ ರೈರರು ಹಾಗೂ ಕೃಷಿ ಉತ್ಪಾದಕ ಸಂಘಟನೆಯ ಪ್ರತಿನಿಧಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸಾಲಪತ್ರಗಳನ್ನು ವಿತರಿಸಲಾಯಿತು.
ಭಾರತೀಯ ಸ್ಟೇಟ್ ಬ್ಯಾಂಕಿನ ಹಣಕಾಸು ಸೇರ್ಪಡೆ ಮತ್ತು ಕಿರು ಮಾರುಕಟ್ಟೆ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕರಾದ ಜಿ.ನರಸಿಂಹಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೃಷಿ ಇಲಾಖೆಯ ಉಪನಿರ್ದೇಶಕ ಎಚ್.ಡಿ.ಕೋಳೇಕರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟೆ, ಜಿಲ್ಲಾ ಮಾರಾಟ ಕೇಂದ್ರದ ಮುಖ್ಯ ವ್ಯವಸ್ಥಾಪಕ ಗುರುಪ್ರಸಾದ ಕಾಮತ, ಕೃಷಿ ಅಭಿವೃದ್ಧಿ ಶಾಖೆಯ ವ್ಯವಸ್ಥಾಪಕ ಪುಷ್ಟರಾಮ್ ಗಣೇಶ್ ಮತ್ತು ರೈತರು ಮತ್ತಿತರರು ಪಾಲ್ಗೊಂಡಿದ್ದರು.