ರಾತ್ರಿ ಕರ್ಫ್ಯೂ ನಿರ್ಧಾರ ವಾಪಸ್

0

ಬೆಂಗಳೂರು, ಡಿ. 24- ರೂಪಾಂತರ ಹೊಂದಿರುವ ಕೊರೊನಾ ವೈರಾಣು ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶ ದಿಂದ ಇಂದಿನಿಂದ ಜ. 2ರ ವರೆಗೆ ರಾತ್ರಿ ಕರ್ಫ್ಯೂ ವಿಧಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ವಾಪಸು ಪಡೆದಿದೆ.

ಸರ್ಕಾರದ ಈ ತೀರ್ಮಾನದ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ವಿರೋಧಗಳು ವ್ಯಕ್ತವಾಗಿದ್ದವು. ಹೀಗಾಗಿ, ಸಂಪುಟ ಸಹೋದ್ಯೋಗಿಗಳ ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯ ಪಡೆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾತ್ರಿ ಕರ್ಫ್ಯೂ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.

‘ಸಾರ್ವಜನಿಕರು ಸ್ವಯಂ ನಿರ್ಭಂಧ ವಿಧಿಸಿಕೊಳ್ಳಬೇಕು. ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳಬೇಕು. ಸರ್ಕಾರ ವಿಧಿಸಿದ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಈ ವೈರಾಣುವಿನ ಹರಡುವಿಕೆ ತಡೆಯಬೇಕು’ ಎಂದೂ ಮುಖ್ಯಮಂತ್ರಿ ಅವರು ಮನವಿ ಮಾಡಿದ್ದಾರೆ.

ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ಪತ್ತೆಯಾದ ರೂಪಾಂತರ ಹೊಂದಿದ ಕೋವಿಡ್ ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶ ದಿಂದ ತಜ್ಞರ ಸಲಹೆಯ ಮೇರೆಗೆ ರಾತ್ರಿ ಕರ್ಫ್ಯೂವನ್ನು ಜಾರಿಗೆ ತರಲು ಸರ್ಕಾರ ತೀರ್ಮಾ ನಿಸಿತ್ತು.