ಬೆಳಗಾವಿ, ಡಿ. 26- ‘ದೇಶದ ಒಗ್ಗಟ್ಟಿಗೆ ನಮ್ಮ ಸಂಸ್ಕೃತಿ ಕಾರಣವಾಗಿದೆ. ಇಂತಹ ವೈಶಿಷ್ಟ್ಯವನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ ಎಂದು ಉತ್ತರ ಮತ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚಿಗುರು ಚಿಣ್ಣರ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದ ಅನೇಕ ದೇಶಗಳು ಭಾರತೀಯ ಸಂಸ್ಕೃತಿಯನ್ನು ಅಧ್ಯಯನ ಮಾಡುತ್ತವೆ. ಆದ್ದರಿಂದ ನಮ್ಮ ದೇಶದ ಸಂಸ್ಕೃತಿಯನ್ನು ನಾವೆಲ್ಲರೂ ಉಳಿಸಿ–ಬೆಳೆಸಬೇಕು. ಕೇವಲ ಅಂಕಗಳನ್ನು ಗಳಿಸುವುದರಿಂದ ಪ್ರಜ್ಞಾವಂತ ನಾಗರಿಕರಾಗುತ್ತಾರೆ ಎನ್ನುವುದು ತಪ್ಪು ಕಲ್ಪನೆಯಾಗಿದೆ. ಶಿಕ್ಷಣದ ಜೊತೆಗೆ ನಮ್ಮ ಸಂಸ್ಕೃತಿಯನ್ನು ಉಳಿಸುವುದು ವಿದ್ಯಾರ್ಥಿಗಳ ಆದ್ಯತೆಯಾಗಬೇಕು ಎಂದು ಕಿವಿಮಾತು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಇಲಾಖೆಯ ವತಿಯಿಂದ ಚಿಗುರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಗತ್ತೇ ಒಂದು ಸುಂದರ ತೋಟವಾದರೆ ಮಕ್ಕಳು ಅದರಲ್ಲಿರುವ ಪುಷ್ಪ ಗಳಿದ್ದಂತೆ. ಪುಷ್ಪಗಳು ಅರಳಬೇಕಾದರೆ ಸೂಕ್ತ ರೀತಿಯಲ್ಲಿ ಪ್ರೋತ್ಸಾಹ ಕೊಡಬೇಕಾಗುತ್ತದೆ’ ಎಂದು ತಿಳಿಸಿದರು.
ಬೆಳಗಾವಿ ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಶ್ರೀರಂಗ ಜೋಶಿ, ವೇಣುಧ್ವನಿ ಬಾನುಲಿ ಕೇಂದ್ರದ ನಿರೂಪಕಿ ಸುನೀತಾ ದೇಸಾಯಿ, ಸತ್ಯನಾರಾಯಣ, ರೋಹಿಣಿ ಗಂಗಾಧರಯ್ಯ, ಲೇಖಕಿಯರ ಸಂಘ ಜಿಲ್ಲಾ ಘಟಕದ ಅಧ್ಯಕ್ಷೆ ಹೇಮಾ ಸುನೊಳ್ಳಿ, ಪತ್ರಕರ್ತ ಮಹೇಶ್ ವಿಜಾಪುರ ಸೇರಿದಂತೆ ಇತರೆ ಗಣ್ಯರು ಇದ್ದರು.