ಸಿಎಂ ಬದಲಾವಣೆ ಇಲ್ಲ

0

ಬೆಳಗಾವಿ, ಡಿ. 26 – ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಬಿ.ಎಸ್. ಯಡಿಯೂರಪ್ಪ ಅವರೇ ಆ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಬೆಳಗಾವಿಯಲ್ಲಿ ಶನಿವಾರ ಮಾತನಾಡಿದ ಅವರು, ಸಂಕ್ರಾಂತಿಗೆ ಸಚಿವ ಸಂಪುಟ ವಿಸ್ತರಣೆ ಮಾತ್ರವಲ್ಲ, ಮಹತ್ವದ ಬದಲಾವಣೆ ಆಗಲಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಅವರ ಹೇಳಿಕೆ ಪ್ರತಿಕ್ರಿಯೆ ನೀಡುವುದಿಲ್ಲ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿ ಯಲಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೇ ಹೇಳಿದ್ದಾರೆ ಎಂದರು.

ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬಗ್ಗೆ ಮಾತನಾಡಬೇಡಿ ಎಂದು ನನ್ನ ಹಿತೈಷಿಗಳು ಹೇಳಿದ್ದಾರೆಯೇ ಹೊರತು ಪಕ್ಷದ ವರಿಷ್ಠರಲ್ಲ. ನಮ್ಮ ಪಕ್ಷದ ವರಿಷ್ಠರು ಸೂಚನೆ ಕೊಡುವಷ್ಟು ದೊಡ್ಡ ನಾಯಕಿ ಅವರು ಅಲ್ಲ. ಗ್ರಾಮೀಣ ಕ್ಷೇತ್ರದಲ್ಲಿ ನಿಮ್ಮ‌ ಅಭಿಮಾನಿಗಳು ಕಟ್ಟಿಕೊಂಡಿರುವ ಸಾಹು ಕಾರ್ ಪಡೆಯವರು ಕ್ಯಾಲೆಂಡರ್ ಹಂಚುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ಹಂಚುವುದು ಮಹಾಪರಾಧವೇ? ಆ ಕ್ಷೇತ್ರವನ್ನು ವಶ ಮಾಡಿಕೊಳ್ಳ ಬೇಕೆಂಬ ಸಂಕಲ್ಪ ನಮ್ಮದಾಗಿದೆ. ಗೆಲ್ಲಲು ಏನು ಬೇಕೋ ಅದನ್ನು ಮಾಡುತ್ತೇವೆ. ಸ್ಥಳೀಯ ಶಾಸಕರು ನಾವೆಲ್ಲರೂ ಸೇರಿ ನೀರಾವರಿಗೆ ಒತ್ತು ಕೊಡುತ್ತೇವೆ ಎಂದು ಹೇಳಿದರು.

ಬಿಜೆಪಿ ಕಾರ್ಯಕ್ರಮದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ದಿವಂಗತ ಸುರೇಶ ಅಂಗಡಿ ಪುತ್ರಿ ಪಾಲ್ಗೊಂಡಿದ್ದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಂಗಡಿ ಪತ್ನಿಗೆ ಟಿಕೆಟ್ ನೀಡಿದರೆ ಒಳ್ಳೆಯದು ಎಂದು ವರಿಷ್ಠರಿಗೆ ತಿಳಿಸಿದ್ದೇನೆ. ಅವರು ಕೈಗೊಳ್ಳುವ ತೀರ್ಮಾನಕ್ಕೆ ‌ಬದ್ಧವಾಗಿದ್ದೇನೆ ಎಂದು ಹೇಳಿದರು.