ಗ್ರಾಪಂ ; ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ

0

ಬೆಳಗಾವಿ, ಡಿ. 27- ಗ್ರಾಮ ಪಂಚಾಯಿತಿ 2ನೇ ಹಂತದ ಚುನಾವಣೆ ಭಾನುವಾರ ಶಾಂತಿಯುತವಾಗಿ ನಡೆದಿದ್ದು, ಶೇ 82.70ರಷ್ಟು ಮತದಾನ ವಾಗಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

‘ಚಿಕ್ಕೋಡಿ, ರಾಯಬಾಗ, ಅಥಣಿ, ಕಾಗವಾಡ, ನಿಪ್ಪಾಣಿ, ರಾಮದುರ್ಗ ಮತ್ತು ಸವದತ್ತಿ ತಾಲ್ಲೂಕುಗಳಲ್ಲಿ ಮತದಾನ ನಡೆಯಿತು. ಬೆಳಿಗ್ಗೆ 7ರಿಂದ ಆರಂಭಗೊಂಡ ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಇದರೊಂದಿಗೆ, ಜಿಲ್ಲೆಯ ಒಟ್ಟು 477 ಗ್ರಾಮ ಪಂಚಾಯಿತಿಗಳ ಚುನಾವಣೆ ಮುಗಿದಿದೆ. ಮೊದಲ ಹಂತದಲ್ಲಿ ಡಿ. 22ರಂದು 7 ತಾಲ್ಲೂಕುಗಳ 259 ಮತ್ತು 2ನೇ ಹಂತದಲ್ಲಿ 218 ಗ್ರಾ.ಪಂ.ಗಳಿಗೆ ಭಾನುವಾರ ಮತದಾನ ನಡೆಯಿತು. 2ನೇ ಹಂತದಲ್ಲಿ ಒಟ್ಟು 1,789 ಮತಗಟ್ಟೆಗಳನ್ನು ಸ್ಥಾಪಿಸ ಲಾಗಿತ್ತು.

2ನೇ ಹಂತದ ಪ್ರಾಥಮಿಕ ಮಾಹಿತಿಯ ಪ್ರಕಾರ ನಿಪ್ಪಾಣಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ ಶೇ.84.62ರಷ್ಟು ಮತ್ತು ಕಾಗವಾಡ ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ‌ ಅಂದರೆ ಶೇ.80.95ರಷ್ಟು ಮತದಾನವಾಗಿದೆ. ಒಟ್ಟು 11,59,813 ಮತದಾರರ ಪೈಕಿ 9,59,193 ಮಂದಿ ಮತ ಚಲಾಯಿಸಿದ್ದಾರೆ.

ಬೆಳಿಗ್ಗೆಯಿಂದಲೂ ಮತದಾನ ಚುರುಕಾಗಿತ್ತು. ಬೆಳಿಗ್ಗೆ 7ರಿಂದ 9ರವೆಗೆ ಶೇ 8.27, 9ರಿಂದ 11ರವರೆಗೆ ಶೇ.24, ಮಧ್ಯಾಹ್ನ 1ರವರೆಗೆ ಶೇ. 45. 13 ಆಗಿತ್ತು. ಹೀಗೆ ಬಿರುಸಿನಿಂದ ನಡೆದ ಮತದಾನವು ಮಧ್ಯಾಹ್ನ 3ರ ವೇಳೆಗೆ ಶೇ.63.93ರಷ್ಟಾಯಿತು. ಸಂಜೆ 5ಕ್ಕೆ ನಿಗದಿತ ಸಮಯ ಕೊನೆಗೊಂಡಾಗ ಒಟ್ಟು ಶೇ 82.70ರಷ್ಟು ಮತದಾನ ದಾಖಲಾಯಿತು.

ಮತಗಟ್ಟೆಗಳನ್ನು ಆಯಾ ತಾಲ್ಲೂಕು ಕೇಂದ್ರಗಳ ಸ್ಟ್ರಾಂಗ್‌ ರೂಂಗಳಲ್ಲಿ ಸಂಗ್ರಹಿಸಲಾಗಿದೆ. ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ. ಮೊದಲ ಹಂತದಲ್ಲಿ ಮತದಾನವಾದ ಏಳು ತಾಲ್ಲೂಕುಗಳಲ್ಲಿ ಶೇ.81.01ರಷ್ಟು ಮತದಾನವಾಗಿತ್ತು.

ಇದರೊಂದಿಗೆ ಜಿಲ್ಲೆಯ 14 ತಾಲ್ಲೂಕುಗಳಲ್ಲೂ ಮತದಾನ ಮುಗಿಗಿದ್ದು, ಡಿ.30ರಂದು ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಲಿದೆ. ಆಯಾ ತಾಲ್ಲೂಕು ಕೇಂದ್ರಗಳಲ್ಲೇ ಮತ ಎಣಿಕೆ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅವರು  ತಿಳಿಸಿದ್ದಾರೆ.