ಕುವೆಂಪು ಅವರ ಮಂತ್ರಮಾಂಗಲ್ಯ ಪದ್ದತಿ ಅನುಸರಿ ಸರಳ ವಿವಾಹವಾಗುವ ಮೂಲಕ ಮಾದರಿಯಾಗಿ ಬದುಕಬೇಕು ಎಂದು ಮಾನವ ಬಂಧುತ್ವ ವೇದಿಕೆ : ರವೀಂದ್ರ ನಾಯ್ಕರ್
ಬೆಳಗಾವಿ: ಪ್ರತಿಯೊಬ್ಬ ಯುವಕ, ಯುವತಿಯರು ಕುವೆಂಪು ಅವರ ಮಂತ್ರಮಾಂಗಲ್ಯ ಪದ್ದತಿ ಅನುಸರಿ ಸರಳ ವಿವಾಹವಾಗುವ ಮೂಲಕ ಮಾದರಿಯಾಗಿ ಬದುಕಬೇಕು ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಹೇಳಿದರು.
ಇಲ್ಲಿನ ಮಾನವ ಬಂಧುತ್ವ ವೇದಿಕೆ ಕೇಂದ್ರ ಕಚೇರಿಯಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿರುವ ‘ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನೋತ್ಸವ’ ‘ಕವಿತೆ ವಾಚನ’ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುವೆಂಪು ಅವರು, ಮಂತ್ರಮಾಂಗಲ್ಯ ಪರಿಕಲ್ಪನೆಯಿಂದಲೇ ಕಳೆದ ವರ್ಷ ಡಿ.6 ರಂದು ಸದಾಶಿವನಗರ ರುದ್ರಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆ ಸಂಘಟನೆ ಆಯೋಜಿಸಿದ್ದ ಪರಿ ನಿರ್ವಾಣ ದಿನದಂದು ಮಂತ್ರಮಾಂಗಲ್ಯ ಪದ್ದತಿಯಂತೆ ವಿವಾಹ ನೆರವೇರಿಸಿದ್ದೇವು. ಈ ವರ್ಷ ಗುಲ್ಬರ್ಗದಲ್ಲಿಯೂ ಇದೇ ರೀತಿ ಜೋಡಿಯೊಂದು ದಾಂಪತ್ಯ ಜೀವಕ್ಕೆ ಕಾಲಿಟ್ಟಿದ್ದು, ಅನ್ಯೂನ್ಯವಾಗಿ ಬದುಕುತ್ತಿದ್ದಾರೆ. ಲಕ್ಷಾಂತರ ಹಣ ಖರ್ಚು ಮಾಡುವ ಬದಲು ಕುವೆಂಪು ಅವರ ಮಂತ್ರ ಮಾಂಗಲ್ಯ ಮೂಲಕ ಸರಳವಾಗಿ ವಿವಾಹವಾಗಿ ಎಲ್ಲರಿಗೂ ಮಾದರಿಯಾಗಿ ಬದುಕಬೇಕು ಎಂದರು.
ಅಂಬೇಡ್ಕರ್ ಅವರಿಗಿಂತಲೂ ಮೊದಲು ಕುವೆಂಪು ಅವರು, ದಲಿತರ ಬಗ್ಗೆ ಬೆಳಕು ಚಲ್ಲಿದ ಕವಿಯಾಗಿದ್ದಾರೆ. ಮೌಢ್ಯ, ಗೊಡ್ಡು ಸಂಪ್ರದಾಯ, ಪುರೋಹಿತ ಶಾಹಿ ವ್ಯವಸ್ಥೆಯನ್ನು ಟೀಕಿಸುತ್ತಲೇ ಬಂದವರು. ಯುಗದಕವಿ ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರು ಸಾಗಬೇಕು ಎಂದು ಹೇಳಿದರು.
ಸಾಹಿತಿ ಯಲ್ಲಪ್ಪ ಹಿಮ್ಮಡಿ ಮಾತನಾಡಿ, ಕುವೆಂಪು ಅವರು ರೈತರ ಬಗ್ಗೆ ಅಪಾರ ಕಾಳಜಿಯುಳ್ಳವಾಗಿದ್ದರು. ಸದ್ಯ ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆ ಜಾರಿಗೆ ತರುವ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ರೈತರ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದರು.
ಉಪನ್ಯಾಸಕ ನದೀಮ್ ಸನದಿ ಪ್ರಾಸ್ತಾವಿಕ ಮಾತನಾಡಿ, ಕುವೆಂಪು ಅವರು ಅಜರಾಮರ ನಕ್ಷತ್ರ. ಬರೆದಂತೆ ಬದುಕಿದ ಏಕೈಕ ಕವಿ ಎಂದು ಬಣ್ಣಿಸಿದರು.
ಅನುರಾಧಾ ಕನಸಗೇರಿ, ಗೋಪಿಕಾ ಹರಗೆ, ಅಕ್ಷತಾ ಯಳ್ಳೂರ, ಗೌತಮ ಮಾಳಗೆ, ದಿವ್ಯಾ ಕಾಂಬಳೆ, ಮಂಜುನಾಥ್ ಪಾಟೀಲ್, ಸಂತೋಷ ನಾಯಕ, ಹನುಮಂತ ಯರಗಟ್ಟಿ, ಪಾಂಡುರಂಗ ಗಾಣಿಗೇರ ಅವರು ಕುವೆಂಪು ಅವರ ಕವಿತೆಗಳನ್ನು ವಾಚಿಸಿದರು.ಕಾವೇರಿ ಬುಕ್ಯಾಳಕರ್ ಕಾಂತ್ರಿಗೀತೆ ಹಾಡಿದರು.
ಸಮತಾ ಶಾಲಾ ಮುಖ್ಯೋಪಾಧ್ಯಯ ಶಂಕರ ಬಾಗೇವಾಡಿ, ಬಾಲಕೃಷ್ಣ ನಾಯಕ, ಮಂಜುನಾಥ್ ಪಾಟೀಲ್, ಪ್ರಕಾಶ ಬೊಮ್ಮನವರ್ ಮುಂತಾದವರು ಇದ್ದರು. ಅಡಿವೆಪ್ಪ ಇಟಗಿ ಸ್ವಾಗತಿಸಿದರು. ಸುಧಾ ಕೊಟಬಾಗಿ ನಿರೂಪಿಸಿದರು, ಸಿದ್ದರಾಮ ತಳವಾರ ವಂದಿಸಿದರು.