ಸಮಗ್ರ ಜೀವ ಸಂಕುಲದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಖ್ಯಾತ ನ್ಯಾಯವಾದಿ ಎಂ.ಬಿ.ಜಿರಲಿ ಅಭಿಪ್ರಾಯ ಪಟ್ಟರು.

0

ಬೆಳಗಾವಿ: ವಿಶ್ವದಲ್ಲಿ ಜನ್ಮ ತಾಳಿದ ಬಂಡವಾಳಷಾಹಿತ್ವವಾದ, ಕಮ್ಯುನಿಸಂ ಮತ್ತು ಸಮಾಜವಾದಗಳು ವಿವಿಧ ಯುದ್ಧ ಸಂಭವಿಸಲು ಕಾರಣವಾದರೆ, ಪಂಡಿತ ದೀನದಯಾಳ್ ಉಪಾಧ್ಯಾಯ ಅವರ ಏಕಾತ್ಮ ಮಾನವತಾವಾದದಿಂದ ಯಾವುದೇ ಯುದ್ಧ ಸಂಭವಿಸದೆ, ಸಮಗ್ರ ಜೀವ ಸಂಕುಲದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಖ್ಯಾತ ನ್ಯಾಯವಾದಿ ಎಂ.ಬಿ.ಜಿರಲಿ ಅಭಿಪ್ರಾಯ ಪಟ್ಟರು.

ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪಂಡಿತ ದೀನದಯಾಳ್ ಉಪಧ್ಯಾಯ ಅಧ್ಯಯನ ಪೀಠದ ವತಿಯಿಂದ ಕಾಲೇಜಿನ ಪ್ರಾಂಶುಪಾಲರಿಗಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ದೀನ ದಯಾಳ ಅವರ ವಿಚಾರಧಾರೆಯನ್ನು ಅಳವಡಿಸಿಕೊಂಡ ಹಿನ್ನೆಲೆಯಲ್ಲಿ ಇಂದು ಅಂತ್ಯೋದಯ, ಜನಧನ ಮತ್ತು ಜನೌಷಧಿಯಂಥ ಜನಪರ ಯೋಜನೆಗಳು ಜನ ಸಾಮಾನ್ಯರಿಗೆ ಯಶಸ್ವಿಯಾಗಿ ತಲುಪಲು ಸಾಧ್ಯವಾಗಿದೆ ಎಂದರು.

ದೀನದಯಾಳ್‍ರು ದೇಶ ಕಂಡ ಕಾಲಜ್ಞಾನಿ, ಶ್ರೇಷ್ಠ ರಾಜಕೀಯ ಚಿಂತಕ, ಸಮಾಜ ಸುಧಾರಕ ಹಾಗೂ ಆರ್ಥಿಕ ತಜ್ಞರಾಗಿ, ಅವರು ನೀಡಿದ ಅನೇಕ ವಿಚಾರಗಳು ನಮಗಿಂದು ಮಾರ್ಗದರ್ಶನವಾಗಿವೆ. ಅವರ ಮೇಲೆ ಸ್ವಾಮಿ ವಿವೇಕಾನಂದ, ಆದಿ ಶಂಕರಾಚಾರ್ಯರು ಮತ್ತು ಆಚಾರ್ಯ ವಿಷ್ಣು ಗುಪ್ತರೆನಿಸಿದ ಚಾಣಕ್ಯ ಅವರು ಪ್ರಭಾವ ಬೀರಿದ್ದರ ಪರಿಣಾಮ ಅವರೊಬ್ಬ ಶ್ರೇಷ್ಠ ರಾಷ್ಠ್ರ ಭಕ್ತರಾಗಿ ಹೊರಹೊಮ್ಮಿದರು. 1964-65 ರಲ್ಲಿ ಸ್ವತ: ಕಾಂಗ್ರೆಸ್ ಪಕ್ಷವೇ ದೀನದಯಾಳ್‍ರನ್ನು ಮೇರು ಪರ್ವತದ ನೇತಾರವೆಂದು ಬಣ್ಣಿಸಿತ್ತು. ಅವರು ತಮ್ಮ ಚರಿತ್ರೆಗಿಂತ ಚಾರಿತ್ರ್ಯವನ್ನು ಶುದ್ಧವಾಗಿರಿಸಿಕೊಂಡ ಶ್ರೇಷ್ಠ ಸಂತರೆನಿಸಿಕೊಂಡಿದ್ದರಿಂದಲೆ ಇಂದು ಜನ ದೇಶದಲ್ಲಿ ಪೂಜಿಸುವಂತಾಗಿದೆ ಎಂದು ಹೇಳಿದರು.

ಸುಮಾರು 150 ವರ್ಷಗಳ ಕಾಲ ಪರಕೀಯರ ಕಪಿಮುಷ್ಠಿಯಲ್ಲಿದ್ದ ಭಾರತವನ್ನು ವಿಮೋಚನೆಗೊಳಿಸಲು ಕಾರಣವಾದ ರಾಷ್ಟೀಯ ಕಾಂಗ್ರೆಸ್ ಪಕ್ಷದಿಂದ ಸ್ವಾತಂತ್ರ್ಯ ಪಡೆದ ಸಾಧನೆ ಮಾಡಿದ್ದೆ ಸಾಕು. ಆ ಪಕ್ಷವನ್ನು ಬಳಸಿಕೊಂಡು ದೇಶವಾಳುವ ರಾಜಕಾರಣ ಬೇಡವೆಂದು ಸ್ವತ: ಮಹಾತ್ಮ ಗಾಂಧಿಜಿಯವರೆ ಕಾಂಗ್ರೆಸ್ಸ ಪಕ್ಷದ ವಿಸಜರ್ನೆಗೆ ಆಗ್ರಹಿಸಿದ್ದರು. ಆದರೂ ಜವಾಹರಲಾಲ ನೆಹರು ಅದೇ ಪಕ್ಷದಿಂದ ದೇಶವಾಳಲು ತೊಡಗಿ, ಸಮಾಜವಾದದಿಂದ ಭಾರತದಲ್ಲಿ ಕೈಗಾರಕೀಕರಣದ ಹೆಸರಿನಲ್ಲಿ ದೇಶವನ್ನು ಅಧೋಗತಿ ತಳ್ಳಲು ಕಾರಣವಾದರು. ನೆಹರು ಅವರ ರಾಜಕಾರಣದ ದುಷ್ಪರಿಣಾಮವನ್ನು ಸುಧಾರಿಸಲು ಪಂಡಿತ ದೀನದಯಾಳ್ ಅವರ ವಿಚಾರಧಾರೆ ಈಗ ಅತ್ಯವಶ್ಯವಾಗಿದೆ ಎಂದರು.

ಐದು ಸಾವಿರ ವರ್ಷಗಳ ಕಾಲ ಭಾರತ ತನ್ನ ಅಧ್ಯಾತ್ಮ ತತ್ವದಿಂದ ಇಡೀ ವಿಶ್ವವನ್ನೇ ಪ್ರತಿನಿಧಿಸಿತ್ತು. ಆದರೆ 150 ವರ್ಷಗಳವೆರೆಗೆ ಬ್ರೀಟಿಷರ ದಾಸ್ಯದಿಂದ ವಿಮೋಚನೆ ಹೊಂದಲು 90 ವರ್ಷಗಳವೆರೆಗೆ ತ್ಯಾಗ ಬಲಿದಾನ ಗೈಯಬೇಕಾಯಿತು. ಸ್ವಾತಂತ್ರ್ಯ ಗಳಿಸಿ ಅರ್ಧ ಶತಮಾನ ಕಳೆದರೂ ದೇಶದ ಅಭಿವೃದ್ಧಿ ಮತ್ತು ಸ್ವಾವಲಂಬನೆ ಅಸಾಧ್ಯವಾಯಿತು. ಯಾವಾಗ ದೇಶದಲ್ಲಿ ಪಂಡಿತ ದೀನದಯಾಳ್ ಉಪಾಧ್ಯಾಯರ ವೈಚಾರಿಕತೆ, ಆರ್ಥಿಕ ಮತ್ತು ರಾಜಕೀಯ ಯೋಜನೆಗಳನ್ನು ಜಾರಿಗೊಳಿಸಲಾಯಿತೊ, ಅಂದಿನಿಂದ ಭಾರತ ಮತ್ತೆ ವಿಶ್ವವನ್ನೇ ಬೆರಗುಗೊಳಿಸುವಂತೆ ಮಾಡಿದೆ ಎಂದರು.
ಗುರುದೇವ ರಾನಡೆ ಅವರು ಸಮಾಜ ಸೇವೆಯಲ್ಲಿ ಪ್ರಚಾರ ಮತ್ತು ಪ್ರಸಿದ್ಧಿಗೆ ನಕಾರ ಇರಬೇಕೆಂದು ಪ್ರತಿಪಾದಿಸಿದ್ದರು. ಅವರಂತೆ ದೀನ್ ದಯಾಳರು ತಮ್ಮ ನಿಸ್ವಾರ್ಥ ದೇಶ ಸೇವೆಯಲ್ಲಿ ಯಾವುದೇ ಪ್ರಚಾರ ಮತ್ತು ಪ್ರಸಿದ್ಧಿ ಪಡೆದವರಲ್ಲ. ತಮ್ಮ ವ್ಯಾಸಂಗ ಜೀವನದಲ್ಲಿ ಸಹಚರರಿಂದ ಪಂಡಿತ ಎಂದು ಕರೆಯಿಸಿಕೊಂಡಿದ್ದೆ ಶಾಶ್ವತವಾಗಿ ಅವರನ್ನು ಪಂಡಿತ ಎಂದು ಸಂಭೋದಿಸಲಾಗುತ್ತಿದೆ. 1916 ರಲ್ಲಿ ಮಥುರಾ ಮೂಲದ ಉಪಧ್ಯಾಯ ಎಂಬ ಜ್ಯೋತಿಷಿ ಕುಟುಂಬದಲ್ಲಿ ಜನಿಸಿದ್ದ ದೀನದಯಾಳರು, ತಮ್ಮ ಎಂಟನೆ ವಯಸ್ಸಿನಲ್ಲಿ ಪಾಲಕರನ್ನು ಕಳೆದು ಕೊಂಡಿದ್ದರು. 1968 ರಲ್ಲಿ ದೇಶ ಸೇವಾರ್ಥ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಉತ್ತರ ಪ್ರದೇಶದ ಮೊಗಲ ಸರಾಯಿ ಎಂಬ ರೈಲು ನಿಲ್ದಾಣದಲ್ಲಿ ಅವರ ಮೃತ ದೇಹ ಪತ್ತೆಯಾಯಿತು. ಅವರ ಅನುಮಾನಸ್ಪದ ಸಾವಿನ ಕುರಿತು ವೈ.ವಿ. ಚಂದ್ರಚೂಡ ಎಂಬ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯನ್ನು ತನಿಖೆಗೆ ನೇಮಿಸಲಾಗಿತ್ತು. ಆದರೂ ದೀನ್ ದಯಾಳ್‍ರ ಸಾವಿನ ರಹಸ್ಯ ಬಯಲಾಗಲಿಲ್ಲವೆಂದು ಅವರು ವಿಷಾಧ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಎಂ. ರಾಮಚಂದ್ರಗೌಡ ಅವರು ಮಾತನಾಡಿ, ಪಂಡಿತ ದೀನ್ ದಯಾಳರ ವಿಚಾರೆಧಾರೆಗಳನ್ನು ಪ್ರತಿ ಕಾಲೇಜು ಮಟ್ಟದಲ್ಲಿ ಪ್ರಚಾರಗೈದು ಪ್ರತಿಯೊಬ್ಬ ವಿದ್ಯಾರ್ಥಿಗೆ ತಿಳಿಯಪಡಿಸುವ ಜವಾಬ್ಧಾರಿ ಪ್ರಾಚಾರ್ಯರ ಮೇಲಿದೆ ಎಂದು ಕರೆ ಕೊಟ್ಟರು. ಅಲ್ಲದೆ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡಲು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ ದೀನದಯಾಳ್ ಉಪಾಧ್ಯಾಯ ಅಧ್ಯಯನ ಪೀಠದಿಂದ ಗ್ರಾಮ ದತ್ತು ಯೋಜನೆಯನ್ನು ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ದೀನದಯಾಳ್ ಉಪಾಧ್ಯಾಯರ ಚಿಂತನೆಗಳ ಮೇಲೆ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಎಂದು ಹೇಳಿದರು.
ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ ಸ್ವಾಗತಿಸಿದರು, ಸಂಯೋಜಕರಾದ ಡಾ. ಪ್ರಕಾಶ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌಲ್ಯ ಮಾಪನ ಕುಲಸಚಿವ ಪ್ರೊ. ಎಸ್.ಎಂ. ಹುರಕಡ್ಲಿ, ಹಣಕಾಸು ಅಧಿಕಾರಿ ಪ್ರೊ. ಡಿ.ಎನ್. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಪ್ರೊ. ಸಾಬಣ್ಣ ತಳವಾರ, ಸಿಂಡಿಕೇಟ್ ಸದಸ್ಯ ಆನಂದ ಹೊಸೂರ ಉಪಸ್ಥಿತರಿದ್ದರು. ಡಾ. ಶಿವಲಿಂಗಯ್ಯ ಗೋಠೆ ನಿರೂಪಿಸಿದರು. ಸಂತೋಷ ಸೊಲಗದ ಪರಿಚಯಿಸಿದರು. ಹಣುಮಂತ ಗಿರಡ್ಡಿ ವಂದಿಸಿದರು.