ವಿಶ್ವಮಾನವ ಪ್ರಜ್ಞೆ ಕುವೆಂಪು ಕೊಡುಗೆ: ಈರಣ್ಣ ಕಡಾಡಿ

0

ಬೆಳಗಾವಿ, ಡಿ.29 : ರಾಷ್ಟ್ರಕವಿ ಕುವೆಂಪು ಅವರು ವಿಶ್ವ ಮಾನವ ಪ್ರಜ್ಞೆಯನ್ನು ಸಮಾಜಕ್ಕೆ ನೀಡಿದ್ದು, ಈ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸುಸಂಸ್ಕøತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬಸವರಾಜ ಕಟ್ಟೀಮನಿ ಸಭಾ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಮಂಗಳವಾರ (ಡಿ.29) ಏರ್ಪಡಿಸಲಾಗಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುವೆಂಪು ಅವರ ವೈಚಾರಿಕತೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಅವರ ಸಾಧನೆ ಅನನ್ಯವಾದುದು ಎಂದರು.
ಇದೇ ವೇಳೆ ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕರಾದ ಡಾ.ಗುರುದೇವಿ ಹುಲ್ಲೆಪ್ಪನವರಮಠ, “ಮನುಷ್ಯ ಹುಟ್ಟುತ್ತಾ ವಿಶ್ವಮಾನವನಾಗುತ್ತಾನೆ. ಮನುಷ್ಯ ಎಷ್ಟು ವರ್ಷ ಬದುಕುತ್ತಾನೆ ಎನ್ನುವುದು ಮುಖ್ಯವಲ್ಲ; ಅವರು ಮಾಡಿರುವ ಸಾಧನೆ ಏನು ಎಂಬುದು ಮುಖ್ಯ. ಮಹಾತ್ಮರ ಜೀವನಗಳು ಉತ್ತಮ, ಉದಾತ್ತ, ಆದರ್ಶಗಳಾಗಿರುತ್ತವೆ” ಎಂದು ಅಭಿಪ್ರಾಯಪಟ್ಟರು.

ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಎಲ್ಲರ ಮನಸ್ಸಿನಲ್ಲಿ ಸದಾ ಅಚ್ಚಳಿ ಉಳಿದ ಏಕೈಕ ಕೃತಿ ಇದನ್ನು ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ.

ಜಾತಿ ಸಂಕೋಲೆಯಿಂದ ಜನರನ್ನು ಬಿಡಿಸಲು ತಮ್ಮ ಸಾಹಿತ್ಯದ ಮೂಲಕ ಜನರು ಗುಡಿ, ಚರ್ಚು, ಮಸೀದಿಗಳಿಂದ ಹೊರಬಂದು ವೈಚಾರಿಕ ಚಿಂತನೆ ಬೆಳೆಸಿಕೊಳ್ಳಲು ಜಾಗೃತಿ ಮೂಡಿಸಿದರು.


ಕುವೆಂಪು ಅವರು ಪ್ರಕೃತಿಯನ್ನು ಅನುಕರಿಸಿದಂತೆ ನಾವೆಲ್ಲರೂ ಅನುಕರಿಸಬೇಕು. ಶಾಂತಿಗಾಗಿ ಪ್ರಕೃತಿಯನ್ನು ಆರಾಧಿಸುವುದಲ್ಲ; ಪ್ರಕೃತಿಗಳನ್ನು ಹಾಳು ಮಾಡದೇ ಹಸಿರನ್ನು ಬೆಳೆಸಿ ಮಾನವೀಯ ಮೌಲ್ಯಗಳನ್ನು ಅನುಸರಿಸಬೇಕು ಎಂದು ಡಾ.ಗುರುದೇವಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಎಚ್. ಭಜಂತ್ರಿ ಅವರು ಸ್ವಾಗತ ಕೋರಿದರು, ಸರ್ವಮಂಗಳ ಅರಳಿಮಟ್ಟಿ ಅವರು ನಿರೂಪಿಸಿದರು. ವಿನಾಯಕ ಮೋರೆ ಅವರು ನಾಡಗೀತೆ ಪ್ರಸ್ತುತಪಡಿಸಿದರು.

ಸಾಹಿತಿಗಳಾದ ನೀಲಗಂಗಾ ಚರಂತಿಮಠ ಮತ್ತು ಹೇಮಾ ಸೋಡೆಳ್ಳಿ ಅವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅನಿಲ ಮೇತ್ರಿ ಹಾಗೂ ತಂಡದವರು ಕುವೆಂಪು ಅವರ ಗೀತೆಗಳನ್ನು ಪ್ರಸ್ತುತಪಡಿಸಿದರು. ಉಮಾ ಮತ್ತು ಪ್ರೇಮಾ ಉಪಾಧ್ಯೆ ತಂಡದವರು ಭಾಗವಹಿಸಿದ್ದರು