ಗ್ರಾಪಂ ಮತ ಎಣಿಕೆ: ನಿಷೇಧಾಜ್ಞೆ ಜಾರಿ ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್ ಆದೇಶಿಸಿದ್ದಾರೆ.

0
ಬೆಳಗಾವಿ,ಡಿ.29. : ಗ್ರಾಮ ಪಂಚಾಯತಿ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಕಮೀಷನರೆಟ್ ವ್ಯಾಪ್ತಿಯಲ್ಲಿನ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಿ.ಕೆ ಮಾಡೆಲ್ ಶಾಲೆಯ ಸುತ್ತಲಿನ ಆವರಣದಿಂದ 500 ಮೀಟರ್
ಸುತ್ತಳತೆಯಲ್ಲಿ ದಿನಾಂಕ 30-12-2020 ರಂದು ಬೆಳಿಗ್ಗೆ 0600 ಗಂಟೆಯಿಂದ ದಿನಾಂಕ 31-12-2020 ರಂದು ಬೆಳಿಗ್ಗೆ 0600 ಗಂಟೆಯವರೆಗೆ ಜಾರಿಗೆ ಬರುವಂತೆ ಸಿಆರ್‍ಪಿಸಿ 1973 ರ ಕಲಂ 144 ರ ಮೇರೆಗೆ ನಿಷೇದಾಜ್ಞೆಯನ್ನು ವಿಧಿಸಿ ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್ ಆದೇಶಿಸಿದ್ದಾರೆ.
ಬೆಳಗಾವಿ ನಗರದ ಬಿ.ಕೆ ಮಾಡೆಲ್ ಶಾಲೆಯ ಸುತ್ತಲಿನ ಆವರಣದಿಂದ 500 ಮೀಟರ್ ವ್ಯಾಪ್ತಿಯಲ್ಲಿ 05 ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ (ಸರ್ಕಾರಿ ಸಭೆ-ಸಮಾರಂಭ ಹೊರತುಪಡಿಸಿ) ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ.
ಈ ಪ್ರದೇಶದಲ್ಲಿ ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ.
ಕಲ್ಲುಗಳನ್ನು, ಕ್ಷಾರಪದಾರ್ಥ, ಪಟಾಕಿ ಇಲ್ಲವೆ ಸ್ಪೋಟಕ ವಸ್ತುಗಳು ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಸದರಿ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ.
ಈ ಪ್ರದೇಶದಲ್ಲಿ ಕಲ್ಲುಗಳನ್ನು ಮತ್ತು ಎಸೆಯುವಂತಹ ವಸ್ತುಗಳನ್ನು ಅಥವಾ ಬಿಡುವ ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ಪ್ರತಿಬಂಧಿಸಲಾಗಿದೆ.
ಬಿ.ಕೆ ಮಾಡೆಲ್ ಶಾಲೆಯ ಸುತ್ತಲಿನ ಆವರಣದಿಂದ 500 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು ಹಾಡುವದನ್ನು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು
ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕರ ಗಾಂಭಿರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ಪ್ರತಿಬಂಧಿಸಲಾಗಿದೆ.
ಯಾವುದೇ ವ್ಯಕ್ತಿ ಸಾರ್ವಜನಿಕರಾಗಲಿ ಈ ಮೇಲೆ ವಿವರಿಸಿದ ಮಾರಕಾಸ್ತ್ರಗಳು, ಸ್ಪೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದು ಕಂಡುಬಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ.
ಅಂತಹ ಮಾರಕಾಸ್ತ್ರಗಳನ್ನು ಸರಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಲಾಗುವುದು. ಅಲ್ಲದೆ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು.
ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ. ಮದುವೆ ಮತ್ತು ಇತರೆ ಧಾರ್ಮಿಕ ಮೆರವಣಿಗೆಗಳು ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ನಿಯಮಗಳನ್ನು ಪಾಲಿಸುವುದು.
ಸದರಿ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಪ್ರಕ್ರೀಯೆ ಸಂಹಿತೆಯ ಕಲಂ 188ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು ಎಂದು ಪೊಲೀಸ್ ಆಯುಕ್ತರಾದ ಡಾ.ಕೆ. ತ್ಯಾಗರಾಜನ್ ಅವರು ತಿಳಿಸಿದ್ದಾರೆ.