ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣದ ಅಂಗವಾಗಿ ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಜ.15 ರಿಂದ ಫೆ.5 ರ ವರೆಗೆ ನಡೆಯಲಿದೆ

0

ಬೆಳಗಾವಿ, ಜ 2- ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣದ ಅಂಗವಾಗಿ ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಜ.15 ರಿಂದ ಫೆ.5 ರ ವರೆಗೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ 800, ಚಿಕ್ಕೋಡಿಯ 600 ಗ್ರಾಮಗಳಲ್ಲಿ ನೆಲೆಸಿರುವ ಹತ್ತು ಲಕ್ಷ ಕುಟುಂಬಗಳನ್ನು ಮಂದಿರ ನಿಧಿ ಸಮರ್ಪಣ ಕಾರ್ಯಕ್ರಮದ ಅಭಿಯಾನ ನಿಮಿತ್ತ ಸಂಪರ್ಕಿಸುವ ಯೋಜನೆ ರೂಪಿಸಲಾಗಿದೆ. ಬೆಳಗಾವಿ ಜಿಲ್ಲೆಯ ಎಲ್ಲಾ ಸಂತರು, ಮಠಾಧೀಶರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಎಲ್ಲರೂ ಈ ಅಭಿಯಾನಕ್ಕೆ ಸಹಕರಿಸಬೇಕು. ಜನರಲ್ಲಿ ತ್ಯಾಗ ಮನೋಭಾವ, ಆಧ್ಯಾತ್ಮಿಕತೆ ಬರಬೇಕು. ರಾಮನ ವಿಚಾರಗಳು ಜನರನ್ನು ಮುಟ್ಟಬೇಕು. ಸಮಸ್ತ ಸಮಾಜ ಬಾಂಧವರು ರಾಮ ಮಂದಿರ ನಿರ್ಮಾಣಕ್ಕೆ ಸಹಕರಿಸಬೇಕು. ಈ ದೇಶದಲ್ಲಿ ಮತ್ತೊಮ್ಮೆ ರಾಮನ ಆದರ್ಶ, ಅವನ ವಿಚಾರಗಳು ಮತ್ತೆ ಮೊಳಗಬೇಕು ಎಂದು ತಿಳಿಸಿದರು.
ರೂ.10, 100, 1,000 ಮುದ್ರಿತ ಕೂಪನ್ ಗಳ ಸಹಾಯದಿಂದ ನಿಧಿ ಸಮರ್ಪಣೆ ನಡೆಯಲಿದೆ. ರೂ.2,000 ಅದಕ್ಕಿಂತ ಹೆಚ್ಚಿನ ಮೊತ್ತ ಅರ್ಪಿಸಿದ ಭಕ್ತರಿಗೆ ರಸೀದಿ ನೀಡಲಾಗುತ್ತದೆ. ಭಕ್ತರಿಗೆ ಭಾರತೀಯ ಆದಾಯ ತೆರಿಗೆ ಕಾಯ್ದೆಯ 80 ಜಿ ಸೆಕ್ಷನ್ ಅಡಿಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯವಿದೆ ಎಂದು ಹೇಳಿದರು.

ಶ್ರೀ ರಾಮ ಮಂದಿರ ಕೇವಲ ರಾಮ ಮಂದಿರವಲ್ಲ. ಅದು ರಾಷ್ಟ್ರ ಮಂದಿರದ ಪ್ರತೀಕ ಎಂದು ಹಿಂದೂ ಸಮಾಜದ ಸಂತರು, ಮಹಂತರು, ಸನ್ಯಾಸಿಗಳು, ಹಿಂದೂ ಸಮಾಜದ ಬಂಧು ಬಾಂಧವರು ಮತ್ತು ಶ್ರೀ ರಾಮ ಭಕ್ತರ ಸಹಯೋಗದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಾಗೂ ಇತರ ಸೌಲಭ್ಯಗಳಿಗೆ ಅನುಕೂಲವಾಗುವಂತೆ ಅಭಿಯಾನ ನಡೆಸುತ್ತಿರುವುದಾಗಿ ಹೇಳಿದರು.

ವಿಎಚ್ ಪಿ ಮುಖಂಡ ಶ್ರೀಕೃಷ್ಣ ಭಟ್, ಶ್ರೀಕಾಂತ್ ಕದಮ್, ಆರ್. ಕೆ. ಬಾಗಿ, ಉಪಸ್ಥಿತರಿದ್ದರು.