ಸಮಾಜದ ಆಗು ಹೋಗುಗಳ ಬಗ್ಗೆ ನಿರ್ಭೀತಿಯಿಂದ ಬೆಳಕು ಚೆಲ್ಲಬೇಕು. ಅಂದಾಗ ಮಾತ್ರ  ಸಮಾಜದಲ್ಲಿ ಉತ್ತಮ ಹೆಸರು ಪಡೆದುಕೊಳ್ಳಲು ಸಾಧ್ಯ.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ

0
ಇತ್ತೀಚಿಗೆ ನಿಧನರಾದ ಕನ್ನಡ ಕಟ್ಟಾಳು, ಹೋರಾಟಗಾರ ಹಾಗೂ ಪತ್ರಕರ್ತ ರಾಘವೇಂದ್ರ ಜೋಶಿ, ಮರಾಠಿ ಪತ್ರಕರ್ತರ ಅಶೋಕ ಯಾಳಗಿ ಹಾಗೂ ಬಿಜೆಪಿ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ ಅವರ ಆತ್ಮಕ್ಕೆ ಶಾಂತಿ ಕೋರಿ ಸೋಮವಾರ ಬೆಳಗಾವಿ ಪತ್ರಕರ್ತರ ಸಂಘ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿ ಸಭಾಭವನದಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಿತ್ತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ  ಮಾತನಾಡಿ,   ಪತ್ರಕರ್ತರು ಸಮಾಜದ ಆಗು ಹೋಗುಗಳ ಬಗ್ಗೆ ನಿರ್ಭೀತಿಯಿಂದ ಬೆಳಕು ಚೆಲ್ಲಬೇಕು. ಅಂದಾಗ ಮಾತ್ರ  ಸಮಾಜದಲ್ಲಿ ಉತ್ತಮ ಹೆಸರು ಪಡೆದುಕೊಳ್ಳಲು ಸಾಧ್ಯ. ಕನ್ನಡ ಭಾಷೆಯ ಪತ್ರಕರ್ತ ರಾಘವೇಂದ್ರ ಜೋಶಿ ಹಾಗೂ ಮರಾಠಿ ಪತ್ರಕರ್ತ ಅಶೋಕ ಯಾಳಗಿ ಅವರನ್ನು ಹತ್ತಿರದಿಂದ ನೋಡಿಲ್ಲ. ಆದರೆ ಅವರ ನಿರ್ಭಿತಿಯಿಂದ ಮಾಡುವ ವರದಿಗಾರಿಕೆ ಬಗ್ಗೆ ಕೇಳಿದ್ದೇನೆ.
ರಾಜ್ಯದಲ್ಲಿಯೇ ಬೆಳಗಾವಿಯಲ್ಲಿ ಮಾಧ್ಯಮ ಕ್ಷೇತ್ರ ಹೊಸ ದಿಕ್ಸೂಚಿಯನ್ನು ಬರೆದಿದೆ. ಇಲ್ಲಿನ ಪತ್ರಿಕೆಗಳು ಸದಾಕಾಲವೂ ನಾಡು, ನುಡಿಗಾಗಿ ಸದಾಕಾಲವೂ ಧ್ವನಿ ಎತ್ತುತ್ತಲಿವೆ ಎಂದರು. ರಾಘವೇಂದ್ರ ಜೋಶಿ ಹಾಗೂ ಅಶೋಕ ಯಾಳಗಿ ಅವರ ನಿಧನದಿಂದ ಬೆಳಗಾವಿ ಮಾಧ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಶೈಲ ಮಠದ ಮಾತನಾಡಿ,  ರಾಘವೇಂದ್ರ ಜೋಶಿ ಅವರೊಂದಿಗೆ ಅತ್ಯಂತ ಒಡನಾಟ ಹೊಂದಿದ್ದಲ್ಲದೇ, ಅವರ ಗರಡಿಯಲ್ಲಿ ಪಳಗಿರುವೆ.

 

ಸಂಘದ ಕಾರ್ಯಾಧ್ಯಕ್ಷ ಕುಂತಿನಾಥ ಕಲಮನಿ ಮಾತನಾಡಿ, ರಾಘವೇಂದ್ರ ಜೋಶಿ ಅವರು ಓರ್ವ ಪತ್ರಕರ್ತನಾಗಿರದೆ, ಅಪ್ಪಟ ಕನ್ನಡ ಹೋರಾಟಗಾರರಾಗಿದ್ದರು. ಸಮಾಜಕ್ಕೆ ಮಾರಕವಾಗುವ ಕಾರ್ಯದ ಹಿಂದೆ ಎಂತಹ ಬಲಿಷ್ಠ ವ್ಯಕ್ತಿಯ ಇದ್ದರೂ, ನೇರವಾಗಿ ಅವರ ಹೆಸರ ಬಳಿಸಿಕೊಂಡು ವರದಿ ಮಾಡುತ್ತಿದ್ದ ನೇರ ಮತ್ತು ನಿಷ್ಠುರ ಪತ್ರಕರ್ತರಾಗಿದ್ದರು.

 

ಮರಾಠಿ ಪತ್ರಕರ್ತರ ಅಶೋಕ ಯಾಳಗಿ ಅವರು, ಪತ್ರಿಕೆಗಳ ಸಿದ್ದಾಂತಗಳನ್ನು ಮೀರದೆ, ಕನ್ನಡಿಗರನ್ನು ಕಡಿಗನಿಸದೇ ವರದಿ ಮಾಡುತ್ತಿದ್ದರು. ಇವರ ಅವಧಿಯಲ್ಲಿ ಗಡಿ, ಭಾಷೆ ವಿವಾದ ಹೆಚ್ಚಾಗಿದ್ದರೂ, ಕನ್ನಡ ಹಾಗೂ ಕನ್ನಡಿಗರನ್ನು ಪ್ರೀತಿಸುವ ವಿಶಾಲ ಹೃದಯ ಹೊಂದಿದ್ದರು. ಈ ಇಬ್ಬರ ಪತ್ರಕರ್ತರ ಹಾಗೂ ಸ್ನೇಹಿತ ಚಿಕ್ಕನಗೌಡರ ಅಗಲಿಕೆ ನಮ್ಮೆಲ್ಲರಿಗೂ ನಷ್ಟವನ್ನುಂಟು ಮಾಡಿದೆ ಎಂದು ತಿಳಿಸಿದರು.
ನಂತರ ಅಗಲಿದ ಮೂವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಭೆಯಲ್ಲಿ  ಸಂಘದ ಉಪಾಧ್ಯಕ್ಷ ಮಹೇಶ ವಿಜಾಪೂರ, ಕಾರ್ಯದರ್ಶಿ ಸುರೇಶ ನೇರ್ಲಿ, ಜಂಟಿ ಕಾರ್ಯದರ್ಶಿಗಳಾದ ಜಗದೀಶ ವಿರಕ್ತಮಠ, ಸುನೀಲ ಪಾಟೀಲ, ಖಜಾಂಚಿ ಮಂಜುನಾಥ ಕೋಳಿಗುಡ್ಡ, ಸದಸ್ಯರಾದ ಕೀರ್ತಿ ಕಾಸರಗೂಡ, ರಾಜಶೇಖರಯ್ಯಾ ಹಿರೇಮಠ, ಅಶೋಕ ಮುದ್ದಣ್ಣವರ, ಹೀರಾಮಣಿ ಕಂಗ್ರಾಳಕರ, ಲಗಮಣ್ಣ ಸಣ್ಣ ಲಚ್ಚಪ್ಪಗೋಳ, ಅರುಣ ಯಳ್ಳೂರಕರ,  ವಿಶ್ವನಾಥ ದೇಸಾಯಿ, ಏಕನಾಥ ಅಗಸಿಮನಿ, ಪುಂಡಲೀಕ ಬಡಿಗೇರ, ಅಶೋಕ ಮಗದುಮ್ಮ , ಮಹಾದೇವ ಪವಾರ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.