ಗಲ್ಲಿಗಳಲ್ಲಿ ಭಗವಾಧ್ವಜ ಹಾರಿಸುವುದಾಗಿ ಎಂಇಎಸ್ ಹೇಳಿಕೆ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಂಗಳವಾರ ಟ್ವಿಟ್

0

ಬೆಳಗಾವಿ : ಬೆಳಗಾವಿ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವು ಮಾಡದಿದ್ದರೆ ಗಲ್ಲಿಗಳಲ್ಲಿ ಭಗವಾಧ್ವಜ ಹಾರಿಸುವುದಾಗಿ ಎಂಇಎಸ್ ಹೇಳಿಕೆ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಂಗಳವಾರ ಟ್ವಿಟ್ ಮಾಡುವ ಮೂಲಕ ಸರ್ಕಾರ ಹಾಗೂ ಎಂಇಎಸ್ ಸಂಘಟನೆಗೆ ತಿವಿದಿದ್ದಾರೆ.

“ಬೆಳಗಾವಿ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವು ಮಾಡದಿದ್ದರೆ ಗಲ್ಲಿಗಳಲ್ಲಿ ಭಗವಾಧ್ವಜ ಹಾರಿಸುವುದಾಗಿ ಎಂಇಎಸ್ ಬೆದರಿಸಿದೆ. ಕನ್ನಡ ಧ್ವಜವನ್ನು ತೆಗೆಯಬೇಕೆಂಬುದೇ ಅಪರಾಧ” ಎಂದು ಹೇಳಿದ್ದಾರೆ. “ಕನ್ನಡ ಧ್ವಜದ ವಿಚಾರದಲ್ಲಿ ನಡೆಯುತ್ತಿರುವ ಕಿತಾಪತಿಗಳನ್ನು ಸರ್ಕಾರ ನೋಡಿಯೂ ಸುಮ್ಮನಿದೆಯೇ?”. ಎಂದು ಪ್ರಶ್ನಿಸಿದ್ದಾರೆ.

“ಇನ್ನು ಬೆದರಿಕೆ ಹಾಕುವುದು ಅಕ್ಷಮ್ಯ. ಅಷ್ಟಕ್ಕೂ ಕನ್ನಡ ಧ್ವಜವೆಂಬುದೇನಾದರೂ ಭಗವಾ ಧ್ವಜಕ್ಕೆ ವಿರುದ್ಧಾರ್ಥಕವೇ? ಕನ್ನಡಿಗನಿಗೆ ಕನ್ನಡ ಧ್ವಜ ಭಗವಾ ಧ್ವಜಕ್ಕೂ ಮಿಗಿಲು” ಎಂದು ಕುಮಾರಸ್ವಾಮಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

“ಬೆಳಗಾವಿಯಲ್ಲಿ ಕನ್ನಡ ಧ್ವಜದ ವಿಚಾರದಲ್ಲಿ ನಡೆಯುತ್ತಿರುವ ಕಿತಾಪತಿಗಳನ್ನು ಸರ್ಕಾರ ನೋಡಿಯೂ ಸುಮ್ಮನಿದೆಯೇ? ಅಥವಾ ‘ಕನ್ನಡಿಗರಿಗೆ ಸರ್ಕಾರ ಹೆದರಬಾರದು’ ಎಂದು ಬಿಜೆಪಿ ಶಾಸಕರೊಬ್ಬರು ಹಿಂದೆ ಹೇಳಿದ್ದ ಮಾತನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆಯೇ? ಬೆಳಗಾವಿಯ ಕನ್ನಡ ವಿರೋಧಿ ಪುಂಡರ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.