ಡಾ.ಬಾಳಾಸಾಹೇಬ್ ಲೋಕಾಪುರಗೆ ಗಳಗನಾಥ ; ಡಾ.ಹನುಮಾಕ್ಷಿಗೆ ನಾ.ಶ್ರೀ ರಾಜಪುರೋಹಿತ ಪ್ರಶಸ್ತಿ ಪ್ರದಾನ “ಸಾಹಿತ್ಯ ಕ್ಷೇತ್ರಕ್ಕೆ ಗಳಗನಾಥರ ಕೊಡುಗೆ ಅಪಾರ”

0

ಬೆಳಗಾವಿ, ಜ.5 : ಸಾಹಿತ್ಯ ಮತ್ತು ಸಂಶೋಧನೆ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಶ್ರೀ ಗಳಗನಾಥ ಹಾಗೂ ನಾ. ಶ್ರೀ. ರಾಜಪುರೋಹಿತ ಅವರಿಗೆ ಸೂಕ್ತ ಮನ್ನಣೆ ಒದಗಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹಾವೇರಿಯ ಶ್ರೀ ಗಳಗನಾಥ ಮತ್ತು ನಾ.ಶ್ರೀ.ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷರಾದ ದುಷ್ಯಂತ ನಾಡಗೌಡ ಅವರು ತಿಳಿಸಿದರು.


ಶ್ರೀ ಗಳಗನಾಥ ಮತ್ತು ಶ್ರೀ ರಾಜಪುರೋಹಿತ ಪ್ರತಿಷ್ಠಾನ ಹಾವೇರಿ ಹಾಗೂ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವತಿಯಿಂದ ಬಸವರಾಜ ಕಟ್ಟಿಮನಿ ಸಭಾಭವನದಲ್ಲಿ ಮಂಗಳವಾರ (ಜ.5) ಏರ್ಪಡಿಸಲಾಗಿದ್ದ 2019ನೇ ಸಾಲಿನ ’ಗಳಗನಾಥ ಸಾಹಿತ್ಯ’ ಹಾಗೂ ’ನಾ. ಶ್ರೀ ರಾಜಪುರೋಹಿತ ಸಂಶೋಧಕ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ರಂಗಸಂಪದ ಅಧ್ಯಕ್ಷರಾಗಿ ಡಾ. ಅರವಿಂದ ಬಿ. ಕುಲಕರ್ಣಿ ಅವರು, “ಗಳಗನಾಥರು ಆಧುನಿಕ ಕನ್ನಡ ಸಾಹಿತ್ಯದ ಮೊದಲ ಕಾದಂಬರಿಕಾರರು. ನಾ.ಶ್ರೀ. ರಾಜಪುರೋಹಿತ ರವರು ಪ್ರಥಮವಾಗಿ ಕನ್ನಡದಲ್ಲಿ ಇತಿಹಾಸ ಗ್ರಂಥ ರಚಿಸಿದವರು” ಎಂದು ಸ್ಮರಿಸಿದರು.

ಹೊಸ ಸಂಶೋಧಕರನ್ನು ಪೆÇ್ರೀತ್ಸಾಹಿಸಬೇಕು. ಹೊಸ ಹೊಸ ಸಂಶೋಧನೆಯ ಪುಸ್ತಕಗಳ ಹೊರತರಬೇಕು, ಅವರ ಕೃತಿಗಳನ್ನು ಸಂಕ್ಷಿಪ್ತ ರೂಪದಲ್ಲಿ ಪ್ರಕಟಿಸುವ ಪ್ರಯತ್ನವೂ ನಡೆಯಬೇಕಾಗಿದೆ. ಈ ದಿಸೆಯಲ್ಲಿ ಸಾಹಿತ್ಯ ದಿಗ್ಗಜರಿಗೆ ಗಳಗನಾಥರು ಪ್ರೇರಣೆಯಾಗುತ್ತಾರೆ ಎಂದು ಹೇಳಿದರು.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕುಲಪತಿಗಳಾದ ಪೆÇ್ರ. ಎಂ ರಾಮಚಂದ್ರ ಗೌಡ ಅವರು, ಕಾದಂಬರಿಕಾರರಾದ ಅಥಣಿಯ ಡಾ.ಬಾಳಾಸಾಹೇಬ್ ಲೋಕಾಪುರ ಅವರಿಗೆ 2019 ರ ಗಳಗನಾಥ ಸಾಹಿತ್ಯ ಪ್ರಶಸ್ತಿಯನ್ನು ಹಾಗೂ ಹುಬ್ಬಳ್ಳಿಯ ಸಾಹಿತಿಗಳು ಮತ್ತು ಶಾಸನ ಸಂಶೋಧಕರಾದ ಡಾ. ಹನುಮಾಕ್ಷಿ ಗೋಗಿ ಅವರಿಗೆ ನಾ.ಶ್ರೀ.ರಾಜಪುರೋಹಿತ ಸಂಶೋಧಕ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಡಾ.ಬಾಳಾಸಾಹೇಬ್ ಲೋಕಾಪುರ ಅವರ ಕುರಿತು ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಅವರು, ಲೋಕಾಪುರ ಅವರು ರಚಿಸಿದ ಸಾಹಿತ್ಯ ಭಿನ್ನವಾಗಿದ್ದರೂ ಕೂಡ ಇಂದಿನ ಯುವ ಪೀಳಿಗೆಗೆ ಬಹಳ ಉಪಯುಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

ನಾ.ಶ್ರೀ.ರಾಜಪುರೋಹಿತ ಪ್ರಶಸ್ತಿ ಪುರಸ್ಕೃತರಾದ ಡಾ.ಹನುಮಾಕ್ಷಿ ಗೋಗಿ ಅವರ ಕುರಿತು ಮಾತನಾಡಿದ ನಿವೃತ್ತ ಪ್ರಾಚಾರ್ಯರಾದ ಡಾ.ಸ್ಮಿತಾ ಸುರೇಬಾನಕರ, ಪ್ರಕಾಶನ ಸಂಸ್ಥೆಯ ಮೂಲಕ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ ಎಂದು ಪ್ರಶಂಸಿಸಿದರು.

ಶ್ರೀ ಗಳಗನಾಥ ಮತ್ತು ನಾ.ಶ್ರೀ.ರಾಜಪುರೋಹಿತ ಅವರು ಸಾಹಿತ್ಯ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುವ ಮೂಲಕ ನಾಡು-ನುಡಿಯ ಪ್ರಗತಿಗೆ ಶ್ರಮಿಸಿದ್ದಾರೆ ಎಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿ ಪೆÇ್ರ.ಮಾಲತಿ ಪಟ್ಟಣಶೆಟ್ಟಿ ಹೇಳಿದರು.

ಪೆÇ್ರ. ಗಂಗಾಧರಯ್ಯ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಶ್ರೀ ಗಳಗನಾಥ ಮತ್ತು ನಾ.ಶ್ರೀ.ರಾಜಪುರೋಹಿತ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಶಶಿಕಲಾ ವೀ. ಹುಡೇದ ಸ್ವಾಗತಿಸಿದರು. ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಕನ್ನಡ ಉಪನ್ಯಾಸಕಿ ಮೈತ್ರೇಯಿಣಿ ಗದಿಗೆಪ್ಪಗೌಡರು ನಿರೂಪಿಸಿದರು.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು, ಶ್ರೀ ಗಳಗನಾಥ ಮತ್ತು ನಾ. ಶ್ರೀ. ರಾಜಪುರೋಹಿತ ಪ್ರತಿಷ್ಠಾನ ಟ್ರಸ್ಟಿಗಳು ಹಾಗೂ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.