ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಪ್ರಗತಿ ಪರಿಶೀಲನೆ : ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಚಿವ ಬಸವರಾಜ್ ಸೂಚನೆ

0

ಬೆಳಗಾವಿ, ಜ.8: ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಳಗಾವಿ ನಗರದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಎಲ್ಲ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಒದಗಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಸಚಿವರಾದ ಬಿ.ಎ.ಬಸವರಾಜ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ (ಜ.8) ನಡೆದ ಸ್ಮಾರ್ಟ್ ಸಿಟಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಬಿಡುಗಡೆ ಮಾಡಬೇಕಾದ ಅನುದಾನ ಬಿಡುಗಡೆಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು.

ಸ್ಮಾರ್ಟ್ ಸಿಟಿ ಕಲ್ಪನೆಗೆ ತಕ್ಕಂತೆ ನಗರ ಸ್ಮಾರ್ಟ್ ಕಾಣಿಸುವಂತೆ ಕೆಲಸಗಳು ಆಗಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಗಳ ಪಾದಚಾರಿ ಮಾರ್ಗ ಸೇರಿದಂತೆ ಫಿನಿಷಿಂಗ್ ಉತ್ತಮ ರೀತಿಯಲ್ಲಿ ನಿರ್ವಹಿಸಬೇಕು ಎಂದರು.

ಸೈಕಲ್ ಟ್ರ್ಯಕ್ ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಬೇಕು ಎಂದರು. ಎಲ್ಲ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಒದಗಿಸಬೇಕು. ವಿಳಂಬವಾದರೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಬಡ್ಡಿ ಹಣದಲ್ಲಿ ಅಭಿವೃದ್ಧಿ ಕೆಲಸಕ್ಕೆ ಅವಕಾಶ:

ಸ್ಮಾರ್ಟ್ ಸಿಟಿ ಯೋಜನೆಯಡಿ ಇರುವ 80 ಕೋಟಿ ಅನುದಾನಕ್ಕೆ ಬರುವ ಬಡ್ಡಿ ಹಣದಲ್ಲಿ ಸೂಕ್ತ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ತಕ್ಷಣವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಬಸವರಾಜ್ ಹೇಳಿದರು.
ಈ ಹಣದಲ್ಲಿ ಬೆಳಗಾವಿ ನಗರ ಮತ್ತು ದಕ್ಷಿಣ ಮತ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಸ್ಮಾರ್ಟ್ ಕ್ಲಾಸ್ ವಿನೂತನ ಮಾದರಿ ಅನುಷ್ಠಾನ ಗೊಳಿಸಲಾಗುತ್ತಿದೆ. ಆದರೆ ಭವಿಷ್ಯದಲ್ಲಿ ಅವುಗಳ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಸೌಕರ್ಯಗಳನ್ನು ಒದಗಿಸಬೇಕು ಎಂದು ಶಾಸಕ ಅಭಯ್ ಪಾಟೀಲ ಸಲಹೆ ನೀಡಿದರು.
ಸ್ಮಾರ್ಟ್ ಕ್ಲಾಸ್ ಗಳಿಗೆ ಕುಷನ್ ಫರ್ನಿಚರ್ ಬದಲಾಗಿ ಸ್ಟೀಲ್ ಫರ್ನಿಚರ್ ನೀಡಿದರೆ ನಿರ್ವಹಣೆ ಸುಲಭವಾಗುತ್ತದೆ ಎಂದರು.
ಸೈಕಲ್ ಟ್ರ್ಯಕ್ ಮೇಲೆ ಪಾರ್ಕಿಂಗ್ ಅಥವಾ ಬೀದಿ ವ್ಯಾಪಾರ ಮಾಡುವರ ಮೇಲೆ ಕ್ರಮಕೈಗೊಳ್ಳಬೇಕು. ಅಂದಾಗ ಮಾತ್ರ ಸೈಕಲ್ ಟ್ರ್ಯಕ್ ಉಪಯುಕ್ತವಾಗುತ್ತದೆ ಎಂದು ಶಾಸಕ ಅಭಯ್ ಪಾಟೀಲ ಸಲಹೆ ನೀಡಿದರು.

 

ಸ್ಮಾರ್ಟ್ ಸಿಟಿ-101 ಕಾಮಗಾರಿ:
ಸ್ಮಾರ್ಟ ಸಿಟಿ ಯೋಜನೆಯಡಿ ಒಟ್ಟಾರೆ 101 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 930 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ್ ಕುರೇರ್ ವಿವರಿಸಿದರು.
ಬಿಡುಗಡೆಯಾಗಿರುವ 494 ಕೋಟಿ ರೂಪಾಯಿ ಪೈಕಿ ಇದುವರೆಗೆ 366 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.
ಕಾಮಗಾರಿಗಳನ್ನು ಪೂರ್ಣಗೊಳಿಸಿದ ದೇಶದ ನೂರು ನಗರಗಳ ಪೈಕಿ ಬೆಳಗಾವಿ ನಗರ 6ನೇ ಸ್ಥಾನದಲ್ಲಿದೆ ಎಂದು ಕುರೇರ್ ತಿಳಿಸಿದರು.

ನಿರಂತರ ನೀರು ಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ವಿಶೇಷ ಸಭೆ ಕರೆದು ರಾಜ್ಯಮಟ್ಟದಲ್ಲಿ ಕೂಡ ಚರ್ಚೆ ಆಗಬೇಕು ಎಂದು ಶಾಸಕ ಹಾಗೂ ಕೆಯುಐಡಿಎಫ್ ಸಿ ಅಧ್ಯಕ್ಷ ಶಂಕರ್ ಪಾಟೀಲ ಮುನೇನಕೊಪ್ಪ ಸಲಹೆ ನೀಡಿದರು.

ಬೆಳಗಾವಿ ಸ್ಮಾರ್ಟ್ ಸಿಟಿ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲೂ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಶಾಸಕ ಅನಿಲ್ ಬೆನಕೆ, ಕೆಯುಡಬ್ಲ್ಯುಸಿ ನಿರ್ದೇಶಕರಾದ ದೀಪಾ ಕುಡಚಿ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್., ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.///

 

ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನೆ :
ಅಕ್ರಮ ಕಟ್ಟಡ, ಬಡಾವಣೆ ತೆರವುಗೊಳಿಸಲು ಸೂಚನೆ

ಬೆಳಗಾವಿ, ಜ.8 :ನಗರದಲ್ಲಿ ನಿಯಮಾವಳಿ ಮೀರಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ ಅನಧಿಕೃತ ಕಟ್ಟಡಗಳನ್ನು ಗುರುತಿಸಿ ನಿಯಮಾವಳಿ ನೋಟಿಸ್ ನೀಡಿ ಅಂತಹ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಚಿವ ಬಿ.ಎ.ಬಸವರಾಜ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ (ಜ.8) ನಡೆದ ನಗರಾಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೂರು ಅಂತಸ್ತುಗಳ ಕಟ್ಟಡ ನಿರ್ಮಾಣಕ್ಕೆ ಪಾಲಿಕೆಯ ವತಿಯಿಂದ ಅನುಮತಿ ಪಡೆದುಕೊಂಡು ಆರು ಅಂತಸ್ತುಗಳ ಕಟ್ಟಡ ನಿರ್ಮಿಸಿದ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, ಇಂತಹ ಅಕ್ರಮಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬುಡಾ ಆಸ್ತಿಗಳಿಗೆ ಬೇಲಿ ಹಾಕಿ ಫಲಕ ಅಳವಡಿಸುವ ಮೂಲಕ ಅತಿಕ್ರಮಣ ತಡೆಗಟ್ಟಬೇಕು. ಇದರಿಂದ ಆಸ್ತಿ ಸಂರಕ್ಷಣೆ ಸಾಧ್ಯವಾಗಲಿದೆ ಎಂದು ಶಾಸಕ ಅನಿಲ್ ಬೆನಕೆ ಅಧಿಕಾರಿಗಳಿಗೆ ತಿಳಿಸಿದರು.

ಕಣಬರಗಿ ಯೋಜನೆ ಶೀಘ್ರ ಅನುಷ್ಠಾನ:
ಕಣಬರ್ಗಿಯಲ್ಲಿ ರೂಪಿಸಲಾಗಿರುವ 157 ಎಕರೆ ವಸತಿ ಯೋಜನೆಗೆ ಸರ್ಕಾರದಿಂದ ತಕ್ಷಣವೇ ಅನುಮೋದನೆ ನೀಡಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಸಚಿವರು ಹೇಳಿದರು.
ಬೆಳಗಾವಿ ಸೇರಿದಂತೆ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಾರ್ಗಸೂಚಿ ರೂಪಿಸುವಂತೆ ಶಾಸಕ ಅಭಯ್ ಪಾಟೀಲ ಸಲಹೆ ನೀಡಿದರು.
ನಗರದಲ್ಲಿ ತೆರವುಗೊಳಿಸಲಾಗಿರುವ 40 ಅನಧಿಕೃತ ಬಡಾವಣೆಗಳ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಲು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ ಮುಂಬರುವ ದಿನಗಳಲ್ಲಿ ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ ಹಾಕಬಹುದು ಎಂದು ಹೇಳಿದರು.
ಬುಡಾ ವಸತಿಯಿಂದ 19 ವಸತಿ ವಿನ್ಯಾಸ ರೂಪಿಸಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಬುಡಾ ಆಯುಕ್ತರಾದ ಪ್ರೀತಂ ನಸಲಾಪುರೆ ವಿವರಿಸಿದರು.
ಕೆಯುಐಡಿಎಫ್ ಸಿ ಅಧ್ಯಕ್ಷರಾದ ಶಂಕರ್ ಪಾಟೀಲ ಮುನೇನಕೊಪ್ಪ, ಕೆಯುಡಬ್ಲ್ಯುಸಿ ನಿರ್ದೇಶಕರಾದ ದೀಪಾ ಕುಡಚಿ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಪಾಲಿಕೆಯ ಆಯುಕ್ತ ಜಗದೀಶ್ ಕೆ.ಎಚ್., ಸ್ಮಾರ್ಟಿ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ್ ಕುರೇರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.////

ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನೆ
ನಿರಂತರ ನೀರು ಯೋಜನೆಗೆ ಸಂಪೂರ್ಣ ನೆರವು: ಸಚಿವ ಬಸವರಾಜ್ ಭರವಸೆ

ಬೆಳಗಾವಿ, ಜ.8 : ನಿರಂತರ ನೀರು ಯೋಜನೆ ನಗರದ ಜನತೆಗೆ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯ ಅನುಷ್ಠಾನ ಕುರಿತು ವಿಶೇಷ ಕಾಳಜಿ ವಹಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಸಚಿವರಾದ ಬಿ.ಎ.ಬಸವರಾಜ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ (ಜ.8) ನಡೆದ ಪಾಲಿಕೆ, ಸ್ಮಾರ್ಟ್ ಸಿಟಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿರಂತರ ನೀರು ಯೋಜನೆ ಯೋಜನೆಗೆ ಮುಖ್ಯಮಂತ್ರಿಗಳಿಂದ ಚಾಲನೆ ನೀಡಲು ಕ್ರಮ ಕೈಗೊಳ್ಳಲಾಗುವುದು.
ಯೋಜನೆಯ ತುರ್ತು ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲ ನೆರವು ಸರ್ಕಾರ ನೀಡಲಿದೆ ಎಂದು ಸಚಿವ ಬಸವರಾಜ್ ಭರವಸೆಯನ್ನು ನೀಡಿದರು.

ಆರ್.ಎಫ್.ಐ.ಡಿ. ಟ್ಯಾಗ್ ವೈಫಲ್ಯ-ವರದಿ ಸಲ್ಲಿಸಲು ಸೂಚನೆ:
ಕಸ ಸಂಗ್ರಹಣೆಗೆ ಸಂಬಂಧಿಸಿದಂತೆ ನಗರದಲ್ಲಿ ಅಳವಡಿಸಲಾಗಿರುವ ಆರ್.ಎಫ್.ಐ.ಡಿ. ಟ್ಯಾಗ್ ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬಸವರಾಜ್ ಎಚ್ಚರಿಕೆ ನೀಡಿದರು.
ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರ ಸ್ವಚ್ಛವಾಗಿಡಬೇಕಾದರೆ ಕಸ ವಿಲೇವಾರಿ ವ್ಯವಸ್ಥೆ ಸಮರ್ಪಕವಾಗಿ ಇರಬೇಕು. ನಿಯಮಾವಳಿ ಉಲ್ಲಂಘಿಸಿ ಕಸ ಚೆಲ್ಲುವವರ ವಿರುದ್ಧ ದಂಡದ ಜತೆಗೆ ಪ್ರಕರಣ ದಾಖಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಆಸ್ತಿ ತೆರಿಗೆ ಸಂಗ್ರಹಕ್ಕೆ ಕಟ್ಟುನಿಟ್ಟಿನ ಸೂಚನೆ:
ನಿಗದಿಪಡಿಸಲಾಗಿರುವ ಆಸ್ತಿ ತೆರಿಗೆಯನ್ನು ಮಾರ್ಚ್ ಅಂತ್ಯದೊಳಗೆ ಶೇ.100 ರಷ್ಟು ಕಡ್ಡಾಯವಾಗಿ ಸಂಗ್ರಹಿಸಬೇಕು ಎಂದು ಸಚಿವ ಬಸವರಾಜ್ ಸೂಚನೆ ನೀಡಿದರು.
ಆಸ್ತಿ ತೆರಿಗೆಯಿಂದ ಸಾರ್ವಜನಿಕರಿಗೆ ಹೆಚ್ಚಿನ ಸೌಕರ್ಯಗಳನ್ನು ಒದಗಿಸುವುದು ಸಾಧ್ಯ. ಆದ್ದರಿಂದ ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ನಿರ್ಲಕ್ಷ್ಯ ತೋರಬಾರದು ಎಂದರು.
ಬಾಕಿ ತೆರಿಗೆಯನ್ನು ಮಾಸಾಂತ್ಯದಲ್ಲಿ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಬಾಕಿ ಉಳಿದಿರುವ ಜಾಹೀರಾತು ಮೊತ್ತ ಪಾವತಿಸದೇ ಇರುವ ಸಂಸ್ಥೆಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಅನಧಿಕೃತ ಜಾಹೀರಾತು ಫಲಕಗಳನ್ನು ತಕ್ಷಣವೇ ತೆರವುಗೊಳಿಸುವಂತೆ ತಿಳಿಸಿದರು.

ಸ್ವಚ್ಛತೆ ನಿರ್ಲಕ್ಷಿಸಿದರೆ ಕ್ರಮ- ಸಚಿವರ ಎಚ್ಚರಿಕೆ:
ಕುಡಿಯುವ ನೀರು ಪೂರೈಕೆ, ಸ್ವಚ್ಛತೆ, ಬೀದಿ ದೀಪ ಮತ್ತಿತರ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು.
ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಶಾಸಕ ಪಾಟೀಲ ಒತ್ತಾಯ:
ನಿರಂತರ ನೀರು ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಳಂಬಕ್ಕೆ ಕಾರಣವಾದ ಸಂಸ್ಥೆಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ ಒತ್ತಾಯಿಸಿದರು.
ಕುಡಿಯುವ ನೀರು, ಒಳಚರಂಡಿ, ಅಮೃತ ಸೇರಿದಂತೆ ಬಹುತೇಕ ಯೋಜನೆ ನೆನೆಗುದಿಗೆ ಬಿದ್ದಿರುವುದರಿಂದ ಜನರು ಜನಪ್ರತಿನಿಧಿಗಳ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಆದ್ದರಿಂದ ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬೆಳಗಾವಿ ನಗರದಲ್ಲಿ ಸುಮಾರು ಒಂದು ಲಕ್ಷ ಆರ್.ಎಫ್.ಐ.ಡಿ. ಟ್ಯಾಗ್ ಅಳವಡಿಸಲಾಗಿದೆ. ಆದರೆ ಅದರಲ್ಲಿ ಕೇವಲ ಮೂರ್ನಾಲ್ಕು ಸಾವಿರ ಕಾರ್ಡುಗಳು ಮಾತ್ರ ರೀಡ್ ಮಾಡಲಾಗುತ್ತಿದೆ ಎಂದು ಶಾಸಕ ಅಭಯ್ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
46 ಕೋಟಿ ರೂಪಾಯಿ ವೆಚ್ಚದ ಆರ್.ಎಫ್.ಐ.ಡಿ. ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸದ ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರಿಗೆ ಒತ್ತಾಯಿಸಿದರು.

ಕಸ ವಿಲೇವಾರಿ-ನಾಗರಿಕ ಸಮಿತಿ ರಚಿಸಲು ಸಲಹೆ:
ಕಸ ವಿಲೇವಾರಿ ಮೇಲುಸ್ತುವಾರಿಗೆ ವಾರ್ಡವಾರು ನಾಗರಿಕ ಸಮಿತಿ ರಚಿಸಬೇಕು. ಸಮಿತಿ ಸಹಿ ಮಾಡಿ ನೀಡಿದ ಬಳಿಕವೇ ಗುತ್ತಿಗೆದಾರರಿಗೆ ಹಣ ಪಾವತಿಸಬೇಕು ಎಂದು ಶಾಸಕ ಅಭಯ್ ಪಾಟೀಲ ಸಲಹೆ ನೀಡಿದರು.
ಅನಧಿಕೃತ ಜಾಹೀರಾತು ಫಲಕಗಳನ್ನು ತಕ್ಷಣವೇ ತೆರವುಗೊಳಿಸಬೇಕು ಮತ್ತು ಬಾಕಿ ಉಳಿಸಿಕೊಂಡಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಮಹಾನಗರ ಪಾಲಿಕೆಯ ಅನುಮತಿ ಇಲ್ಲದೇ ರಸ್ತೆ ಅಗೆಯುವ ನೀರು ಸರಬರಾಜು ಮಂಡಳಿ, ಹೆಸ್ಕಾಂ ಮತ್ತಿತರ ಸಂಸ್ಥೆಗಳ ವಿರುದ್ಧ ದಂಡ ವಿಧಿಸಬೇಕು ಎಂದು ಆಗ್ರಹಿಸಿದರು.
ಕಂಟೋನ್ಮೆಂಟ್ ಪ್ರದೇಶದಲ್ಲಿ ಕಸ ವಿಲೇವಾರಿ ಕೆಲಸ ಸರಿಯಾಗಿ ನಡೆಯುತ್ತಿಲ್ಲ ಎಂದು ಶಾಸಕ ಅನಿಲ್ ಬೆನಕೆ ಅವರು ಸಚಿವರ ಗಮನಕ್ಕೆ ತಂದರು.
ಬೆಳಗಾವಿ ನಗರದಲ್ಲಿ ಯುಜಿಡಿ ವ್ಯವಸ್ಥೆ ಸುಧಾರಣೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವ ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
ಕಸ ಸಂಗ್ರಹಣೆ, ಪ್ರತ್ಯೇಕ ಮತ್ತು ವಿಲೇವಾರಿಗೆ ಪ್ರತಿ ವಾರ್ಡಿಗೆ ಪ್ರತ್ಯೇಕ ವಾಹನ ಹೊಂದುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಪಾಲಿಕೆಯ ಆಯುಕ್ತರಾದ ಜಗದೀಶ್ ತಿಳಿಸಿದರು.

45 ಕೋಟಿ ಆಸ್ತಿ ತೆರಿಗೆ ಗುರಿ:
ಈ ವರ್ಷ 45 ಕೋಟಿ ಗುರಿ ನಿಗದಿಪಡಿಸಲಾಹಿತ್ತು. ಇದುವರೆಗೆ 30 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕಿಂತ ಐದು ಕೋಟಿ ಹೆಚ್ಚುವರಿ ಗುರಿ ನಿಗದಿಪಡಿಸಲಾಗಿದೆ ಎಂದು ಆಯುಕ್ತರಾದ ಜಗದೀಶ್ ತಿಳಿಸಿದರು.
ಕೆಯುಐಡಿಎಫ್ ಸಿ ಅಧ್ಯಕ್ಷರಾದ ಶಂಕರ್ ಪಾಟೀಲ ಮುನೇನಕೊಪ್ಪ, ಕೆಯುಡಬ್ಲ್ಯುಸಿ ನಿರ್ದೇಶಕರಾದ ದೀಪಾ ಕುಡಚಿ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.////