ನೇರ ಮಾರುಕಟ್ಟೆ ನಿಯಂತ್ರಣಕ್ಕೆ ರಾಜ್ಯ ಸರಕಾರದಿಂದ ನಿಯಮ ರೂಪಿಸಿ: ನೇರ ಮಾರುಕಟ್ಟೆ ಕಂಪನಿಗಳ ಒಕ್ಕೂಟದ ಮನವಿ

0

ನೇರ ಮಾರುಕಟ್ಟೆ ನಿಯಂತ್ರಣಕ್ಕೆ ರಾಜ್ಯ ಸರಕಾರದಿಂದ ನಿಯಮ ರೂಪಿಸಿ: ನೇರ ಮಾರುಕಟ್ಟೆ ಕಂಪನಿಗಳ ಒಕ್ಕೂಟದ ಮನವಿ
– ಚೈನ್ ಮಾರ್ಕೇಟಿಂಗ್ ಹೆಸರಿನಲ್ಲಿ ಆಗುತ್ತಿರುವ ಮೋಸದ ವಿರುದ್ದ ಸಂಘಟಿತರಾಗಿ ಹೋರಾಡಲು ನೇರ ಮಾರುಕಟ್ಟೆ ಕಂಪನಿಗಳ ಒಕ್ಕೂಟ ನಿರ್ಧಾರ
– ಕೇಂದ್ರ ಸರಕಾರದ 2016 ರ ನೇರ ಮಾರುಕಟ್ಟೆಯ ನಿಯಮಾವಳಿಗಳನ್ನು ರಾಜ್ಯದಲ್ಲೂ ಅಳವಡಿಸಿ
– ಚಿಟ್ ಫಂಡ್ ಕಾಯ್ದೆಯ ರೀತಿಯಲ್ಲಿಯೇ ನೇರ ಮಾರುಕಟ್ಟೆ ನಿಯಂತ್ರಣಕ್ಕೆ ನಿಯಮಾವಳಿ ತರಲು ಮತ್ತು ಮಂಡಳಿ ರಚಿಸಲು ಮನವಿ

ಬೆಂಗಳೂರು ಜನವರಿ 10: ನೇರ ಮಾರುಕಟ್ಟೆಯ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾಡುತ್ತಿರುವ ಚೈನ್ ಮಾರ್ಕೇಟಿಂಗ್ ವಿರುದ್ದ ಸಂಘಟಿತರಾಗಿ ಹೋರಾಟ ಮಾಡಲು ನೇರ ಮಾರುಕಟ್ಟೆ ಕಂಪನಿಗಳ ಒಕ್ಕೂಟ ನಿರ್ಧರಿಸಿದೆ. ಜನರಿಗೆ ಮೋಸ ಮಾಡುತ್ತಿರುವ ಕಂಪನಿಗಳಿಂದಾಗಿ, ಲಾಕ್ಡೌನ್ ಕಾಲದಲ್ಲೂ ಕೂಡಾ ಉತ್ತಮ ಲಾಭಗಳಿಸಿದ ಮಾರುಕಟ್ಟೆಗೆ ಕೆಟ್ಟ ಹೆಸರು ಬರುತ್ತಿದೆ. ಇದನ್ನು ಕೊನೆಗಾಣಿಸುವ ಉದ್ದೇಶ ನಮ್ಮದಾಗಿದ್ದು, ರಾಜ್ಯ ಸರಕಾರ ನೇರ ಮಾರುಕಟ್ಟೆಯ ನಿಯಂತ್ರಣಕ್ಕೆ ಅಗತ್ಯವಿರುವ ನಿಯಮ ರೂಪಿಸಲು ಮುಂದಾಗಬೇಕು ಎಂದು ಎಮ್ಎಲ್ಎಂ ಶರತ್ ತಿಳಿಸಿದರು.

ನಗರದ ಖಾಸಗಿ ಹೋಟೇಲ್ ನಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಮಾಣಿಕ ನೇರ ಮಾರುಕಟ್ಟೆಯ ವ್ಯವಹಾರದಿಂದ ಆಗುವ ಅನುಕೂಲಗಳನ್ನು ತಿಳಿಸುವುದು, ನೇರ ಮಾರುಕಟ್ಟೆಯನ್ನು ಇನ್ನಷ್ಟು ಬೆಳೆಸುವುದು, ಚೈನ್ ಲಿಂಕ್ ಮಾರುಕಟ್ಟೆ ಯೋಜನೆಗಳ ಮೂಲಕ ಜನರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸುವುದು ನಮ್ಮ ಒಕ್ಕೂಟದ ಮೂಲ ಉದ್ದೇಶವಾಗಿದೆ. ನಮ್ಮ ಈ ಒಕ್ಕೂಟದ ಮೂಲಕ ದೇಶಾದ್ಯಂತ ಜನರಲ್ಲಿ ಇದರ ಉಪಯೋಗಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ. ಅಲ್ಲದೆ, ಜನರಿಗೆ ತೊಂದರೆ ಆಗುವ ಚೈನ್ ಲಿಂಕ್ ಮಾರುಕಟ್ಟೆಯ ಯೋಜನೆಗಳ ಮೇಲೂ ಜಾಗೃತಿಯನ್ನು ಮೂಡಿಸುವ ಕಾರ್ಯ ಮಾಡಲಿದ್ದೇವೆ ಎಂದು ಎಮ್ ಎಲ್ ಎಂ ಶರತ್ ತಿಳಿಸಿದರು.

ರಾಜ್ಯದಲ್ಲಿ ಇರುವ ನೇರ ಮಾರುಕಟ್ಟೆ ಕಂಪನಿಗಳ ಮುಖ್ಯಸ್ಥರುಗಳು ಇದರ ಬಗ್ಗೆ ವಿಸ್ತ್ರತವಾಗಿ ಚರ್ಚೆಯನ್ನು ನಡೆಸಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಸಂಘಟನೆ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ಸಂಘಟನೆಯ ಮೂಲಕ ಕ್ಷೇತ್ರದಲ್ಲಿನ ಸಮಸ್ಯೆಗಳು ಹಾಗೂ ಅದಕ್ಕೆ ಕಾರಣವಾಗಿರುವ ಜನರ ಮೇಲೆ ಕ್ರಮಕೈಗೊಳ್ಳುವುದು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ನೇರ ಮಾರುಕಟ್ಟೆ ಕಂಪನಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲಿವೆ ಎಂದರು.

ಕಾನೂನು ಉಲ್ಲಂಘನೆ ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು ಅದೇ ರೀತಿ ಎಲ್ಲಾ ರೀತಿಯ ಕಾನೂನು ಪಾಲನೆ ಮಾಡಿರುವ ಕಂಪನಿಗಳಿಗೆ ಪ್ರೋತ್ಸಾಹವೂ ಸರಕಾರದಿಂದ ದೊರೆಯಬೇಕಾಗಿದೆ. 2016 ರಲ್ಲಿ ಕೇಂದ್ರ ಸರಕಾರ ನೇರ ಮಾರುಕಟ್ಟೆಗೆ ಸಂಬಂಧಿಸಿದಂತೆ ವಿಸ್ತ್ರುತವಾದ ನಿಯಮಾವಳಿಗಳನ್ನು ಹೊರಡಿಸಿದೆ. ಈ ನಿಯಮಾವಳಿಗಳನ್ನು ರಾಜ್ಯದಲ್ಲಿ ಅಳವಡಿಸಿದಲ್ಲಿ ನೇರ ಮಾರುಕಟ್ಟೆಯ ಅಭಿವೃದ್ದಿಗೆ ಒಳ್ಳೆಯದಾಗಲಿದೆ. ನೇರ ಮಾರುಕಟ್ಟೆ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿದ್ದು, ಇದರ ಸದುಪಯೋಗವಾಗಬೇಕಾಗಿದೆ ಎಂದು ಹೇಳಿದರು.

ಚಿಟ್ ಫಂಡ್ ನ ಕಾಯ್ದೆಗಳಂತೆ ನೇರ ಮಾರುಕಟ್ಟೆಗೂ ಸಂಬಂಧಿಸಿದ ಕಾಯ್ದೆಯನ್ನು ರೂಪಿಸುವುದು ಅಗತ್ಯವಾಗಿದೆ. ಸರಕಾರದ ಹಾಗೂ ಹಲವಾರು ಉನ್ನತ ಸ್ಥರದ ಜನಗಳಲ್ಲಿ ಅದರಲ್ಲೂ ಪೊಲೀಸ್ ಅಧಿಕಾರಿಗಳಲ್ಲಿ ನೇರ ಮಾರುಕಟ್ಟೆಯ ಬಗ್ಗೆ ಬಹಳಷ್ಟು ತಪ್ಪು ಕಲ್ಪನೆಗಳಿವೆ. ಇದನ್ನು ಹೋಗಲಾಡಿಸಲು ಸರಕಾರ ಕ್ರಮ ಕೈಗೊಳ್ಳಬೇಕಾಗಿದ್ದು, ನೇರ ಮಾರುಕಟ್ಟೆ ಕಂಪನಿಗಳ ಒಕ್ಕೂಟ ಇದಕ್ಕೆ ಅಗತ್ಯ ಸಹಕಾರ ನೀಡಲಿದೆ. ಇದಲ್ಲದೆ ನೇರ ಮಾರುಕಟ್ಟೆಯ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಈಗಾಗಲೇ 4 ಪುಸ್ತಕಗಳನ್ನು ಬರೆದಿದ್ದೇನೆ ಎಂದು ಶರತ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯದಲ್ಲಿ ಪ್ರಾಮಾಣಿಕವಾಗಿ ನೇರ ಮಾರುಕಟ್ಟೆ ವ್ಯವಹಾರದಲ್ಲಿ ತೊಡಗಿರುವ ವಿಸ್ಮಾವೇ ಮಾರ್ಕೇಟಿಂಗ್ ಸೊಲ್ಯೂಷನ್ಸ್ ಪ್ರೈ ಲಿ ನ ಸಲ್ಮಾನ್ ಎಜೆ, ವೇ ಟು ವಿನ್ ಸಂಸ್ಥೆಯ ನರೇಶ್ ಚೌಧರಿ, ಮೀಥ್ ಆರ್ ಪಟೇಲ್, ಹೈ ವಿಂಗ್ಸ್ ಸಂಸ್ಥೇಯ ಕಾಮತ್, ವಿನ್ಫಿನ್ತ್ ನ ಜೆ ಮಂಜುನಾಥ್, ಹೆಚ್ ಟಿ ಸಿ ಸಂಸ್ಥೆಯ ಪರಮೇಶ್, ನೀಯರ್ ಮಾಲ್ಸ್ ಸಂಸ್ಥೆಯ ಎಂ ನಾಗರಾಜ್, ಶಿವಾಸ್ ಸಂಸ್ಥೇಯ ಶಿವಕುಮಾರ್, ಎಕ್ಸ್ಟಸಿ ಸಂಸ್ಥೆಯ ಸಂತೋಶ್, ವಿಓಜಿ ಸಂಸ್ಥೆಯ ವಿಜಯ್ ಕುಮಾರ್ ಸೇರಿದಂತೆ ಪ್ರಮುಖ ಕಂಪನಿಗಳ ಮುಖ್ಯಸ್ಥರುಗಳು ಪಾಲ್ಗೊಂಡಿದ್ದರು.