3 ಸಾವಿರ ರೂ. ಸರ್ಕಾರಿ ಡೀಸೆಲ್ ಹಾಕಿಸಿಕೊಳ್ಳುವ ನಿರ್ಗತಿ ನನಗೆ ಬಂದಿಲ್ಲ: ಡಿಸಿಎಂ ಸವದಿ

0

ಅಥಣಿ:  ಸಾರಿಗೆ ಇಲಾಖೆ ತುಂಬ ನಷ್ಟದಲ್ಲಿದೆ ಎಂದು ಹೇಳುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ  ಸರ್ಕಾರಿ ಡಿಪೋದಲ್ಲಿ ತಮ್ಮ ಒಡೆತನದ  ಖಾಸಗಿ ಕಾರಿಗೆ ಡೀಸೆಲ್ ಹಾಕಿಸಿಕೊಂಡ ಕುರಿತು  ವ್ಯಾಪಕವಾಗಿ  ಚರ್ಚೆಯಾಗುತ್ತಿದೆ.

 

ಈ ವಿಚಾರವಾಗಿ ನಗರದಲ್ಲಿ ಇಂದು  ಪ್ರತಿಕ್ರಿಯಿಸಿರುವ ಡಿಸಿಎಂ ಸವದಿ, ಮೂರು ಸಾವಿರ ರೂ. ಗಾಗಿ ಸರ್ಕಾರಿ ಡಿಸೇಲ್ ಹಾಕುವ ನಿರ್ಗತಿ   ನನಗೆ ಬಂದಿಲ್ಲ.  ದೇವರು ನಮ್ಮ ಕುಟುಂಬಕ್ಕೆ ಆರ್ಥಿಕವಾಗಿ ತುಂಬಾ ನೀಡಿದ್ದಾನೆ. ನನ್ನ ಖಾಸಗಿ ಕಾರಿನಲ್ಲಿ ಖಾಸಗಿ ಡ್ರೈವರ್ ಜೊತೆಗೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಇಲ್ಲಿನ ಸರ್ಕಾರಿ ಬಸ್​ ಡಿಪೋ ಆವರಣದಲ್ಲಿ ಈ ಕಾರ್ಯಕ್ರಮ ಆಯೋಜನೆಯಾಗಿತ್ತು. ಈ ಸಂದರ್ಭದಲ್ಲಿ ನಮ್ಮ ಡ್ರೈವರ್‌ ಡಿಸೇಲ್ ಹಾಕಿಸಬೇಕು ಎಂದು ಅಲ್ಲಿನವರನ್ನು ವಿಚಾರಿಸಿ  ಸಮೀಪದಲ್ಲಿ ಪಂಪ್ ಇದೆಯಾ ಎಂದು ಕೇಳಿದ್ದಾರೆ.

 

ಅದಕ್ಕೆ   ದೂರ ಯಾಕೆ ಇಲ್ಲೆ ಪಂಪ್​​ ಇದೆ  ಹಾಕಿಸಿ ಎಂದು ಹೇಳಿದ್ದಾರೆ. ಈ ವೇಳೆ ನಮ್ಮ ಡ್ರೈವರ್ ಗೆ ಅರಿವು ಇಲ್ಲದ ಕಾರಣ, ಹೊರಗಡೆ ಹೋಗದೆ ಡಿಪೋದ ಒಳಗಡೆಯಿದ್ದ ಪಂಪ್​​ನಲ್ಲಿ ಡಿಸೇಲ್ ಹಾಕಿಕೊಂಡಿದ್ದಾರೆ. ಕಾರ್ಯಕ್ರಮ ಬಳಿಕ ನನಗೆ ವಿಷಯ ಗೊತ್ತಾಗಿದೆ ಎಂದರು.

ಪಂಪ್ ಮ್ಯಾನೇಜರ್ ಕರ್ತವ್ಯ ಲೋಪ ಎಸಗಿದ್ದಾರೆ. ಅವರು ಹೇಳಬೇಕಾಗಿತ್ತು ಇಲ್ಲಿ ಖಾಸಗಿ ವಾಹನಗಳ ಡಿಸೇಲ್ ಹಾಕಲ್ಲ ಎಂದು ಸ್ಪಷ್ಟಪಡಿಸಬೇಕಿತ್ತು. ಆದರೆ ಅದು ಆಗಿಲ್ಲ. ಇದು ಅಚಾತುರ್ಯದಿಂದ ನಡೆದಿರುವ ಘಟನೆ. ನನಗೆ ಆಗದೆ ಇರುವವರು ಇದನ್ನ ಪ್ರಚಾರ ಮಾಡುತ್ತಿದ್ದರೆ, ಅವರಿಗೆ ಒಳ್ಳೆದು ಆಗಲಿ ಎಂದು ಹೇಳಿದರು.

ಖಾಸಗಿ ಕಾರಿಗೆ ಡೀಸೆಲ್ ಹಾಕಿಸಿಕೊಂಡ ಕುರಿತು  ವ್ಯಾಪಕವಾಗಿ  ಚರ್ಚೆಯಾಗುತ್ತಿದೆ.

ಕಾಮಗಾರಿಗೆ ಚಾಲನೆ ನೀಡಲು ಬಂದಿದ್ದ ಡಿಸಿಎಂ ಸವದಿ ಅವರು ಬಂದಿದ್ದರು. ಈ ವೇಳೆ ತಮ್ಮ ಖಾಸಗಿ ವಾಹನಕ್ಕೆ ಬೆಳಗಾವಿಯ ಡಿಪೋ‌ ನಂಬರ್ 3ರ ಪೆಟ್ರೋಲ್ ಬಂಕ್‌ನಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಕಾರು ಚಾಲಕ ಡೀಸೆಲ್ ಹಾಕಿಸಿಕೊಂಡಿದ್ದರು. ಸಂಸ್ಥೆಯ ನಿಯಮ ಉಲ್ಲಂಘಿಸಿ 44 ಲೀಟರ್ ಇಂಧನ ಪೂರೈಕೆ ಮಾಡಲಾಗಿದೆ. ಕೆಎ03 ಎನ್.ಎಫ್.8989 ವಾಹನಕ್ಕೆ 44 ಲೀಟರ್ ಇಂಧನ ಹಾಕಲಾಗಿದೆ.

 

ಖಾಸಗಿ ವಾಹನಕ್ಕೆ ಇಂಧನ ಹಾಕುತ್ತಿರುವ ವಿಡಿಯೋ ವೈರಲ್ ಆಗಿ ವ್ಯಾಪಕ  ಚರ್ಚೆಯಾಗುತ್ತಿದ್ದಂತೆ ಎಚ್ಚೆತ್ತ ಬೆಳಗಾವಿ ವಾಯುವ್ಯ ಸಾರಿಗೆ ನಿಗಮದ ಅಧಿಕಾರಿ ಸಾರಿಗೆ ಇಲಾಖೆ ಕಿರಿಯ ಸಹಾಯಕ ಕಿಶೋರ ಬಿ.ಎಸ್ ಗೆ ನೋಟಿಸ್ ಜಾರಿ ಮಾಡಿದ್ದಾರೆ. ಸಂಸ್ಥೆ ನಿಯಮ ಉಲ್ಲಂಘಿಸಿ ಇಂಧನ ಹಾಕಿದ್ದಕ್ಕೆ, ಯಾಕೆ ನಿಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಬಾರದು? ಏಳು ದಿನಗಳ ಒಳಗಾಗಿ ನೋಟಿಸ್ ಗೆ ಉತ್ತರಿಸುವಂತೆ ವಾಕರಸಾ ಸಂಸ್ಥೆ ಬೆಳಗಾವಿ 3ನೇ ಘಟಕದ ವ್ಯವಸ್ಥಾಪಕರಿಂದ ನೋಟಿಸ್ ಜಾರಿ ಮಾಡಲಾಗಿದೆ.