ಮಾರ್ಚ್‌ – ಏಪ್ರಿಲ್‌ನಲ್ಲಿ ಸಂಪುಟ ‍ಪುನಾರಚನೆ

0

ಬೆಳಗಾವಿ, ಜ. 13- ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಸಂಪುಟ ಪುನಾರಚನೆ ಪ್ರಕ್ರಿಯೆಯು ದೊಡ್ಡ ಮಟ್ಟದಲ್ಲಿ ಆಗುತ್ತದೆ. ಈಗ ಸಚಿವ ಸ್ಥಾನ ಕೈ ತಪ್ಪಿದವರಿಗೆ ಆಗ ಅವಕಾಶ ಸಿಗಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ಇಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಮ್ಮ ತಂಡದ ಇನ್ನೂ ಐವರಿಗೆ ಸಚಿವ ಸ್ಥಾನ ಸಿಗಬೇಕಿದೆ. ಮುಂದಿನ ದಿನಗಳಲ್ಲಿ ಆ ಕೆಲಸ ಆಗಲಿದೆ’ ಎಂದರು.

‘ಅಡಗೂರು ಎಚ್. ವಿಶ್ವನಾಥ್, ಮಹೇಶ್ ಕುಮಠಳ್ಳಿ, ಮುನಿರತ್ನ ಆಕಾಂಕ್ಷಿಗಳಿದ್ದಾರೆ. ಕಲಬುರ್ಗಿ ಭಾಗದಲ್ಲಿ ಪಕ್ಷ ಕಟ್ಟಿ ದೊಡ್ಡ ವ್ಯಕ್ತಿ ಸೋಲಿಸಿದ ಮಾಲೀಕಯ್ಯ ಗುತ್ತೇದಾರ್ ಅವರಿಗೂ ಸಚಿವ ಸ್ಥಾನ ಸಿಗಬೇಕಿದೆ. ಗುತ್ತೇದಾರ್‌ ನನಗಿಂತಲೂ ಶಕ್ತಿಶಾಲಿ ಇದ್ದಾರೆ. ಅವರಿಗೆ ಸ್ಥಾನಮಾನ ದೊರೆಯಬೇಕು. ವಿಶ್ವನಾಥ್ ಸಚಿವರಾಗಲು ಕಾನೂನು ತೊಡಕಿದೆ. ಸರ್ಕಾರ ರಚನೆಯಲ್ಲಿ ಸಿ.ಪಿ. ಯೋಗೀಶ್ವರ್ ಪ್ರಮುಖ ಮಾತ್ರ ವಹಿಸಿದ್ದಾರೆ. ಅವರಿಗೆ ಸಂಪುಟದಲ್ಲಿ ಸ್ಥಾನ ಕೊಟ್ಟಿದ್ದಕ್ಕೆ ಬಹಳ ಸಂತೋಷವಾಗಿದೆ’ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ವಿಶ್ವನಾಥ ಆಕ್ರೋಶ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ವಿಶ್ವನಾಥ್‌ ಹಿರಿಯರು. ಅವರು ಮಾತನಾಡುವುದನ್ನು ಆಶೀರ್ವಾದ ಎಂದು ಭಾವಿಸೋಣ. ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಬಸವಕಲ್ಯಾಣ ಮತ್ತು ಮಸ್ಕಿ ವಿದಾನಸಭಾ ಕ್ಷೇತ್ರಗಳ ಉಪ ಚುನಾವಣೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿಗಳ ಚುನಾವಣೆ ಬಳಿಕ ಸಂಪುಟ ಪುನಾರಚನೆ ಆಗಲಿದೆ. ಆಗ, ಬಹಳಷ್ಟು ಮಂದಿಗೆ ಅವಕಾಶ ಸಿಗಲಿದೆ’ ಎಂದರು.

ಉಮೇಶ ಕತ್ತಿ ಬಹಳ ಹಿರಿಯರು. ಅವರಿಗೆ ಹಿಂದೆಯೇ ಸಚಿವ ಸ್ಥಾನ ಸಿಗಬೇಕಿತ್ತು. ಈಗ ಕೊಟ್ಟಿರುವುದಕ್ಕೆ ಖುಷಿ ಯಾಗಿದೆ’ ಎಂದು ತಿಳಿಸಿದರು.

ಸಚಿವ ಸಂಪುಟ ಕೇವಲ ಬೆಂಗಳೂರು ಮತ್ತು ಬೆಳಗಾವಿಗೆ ಸೀಮಿತವಾಗಿದೆ ಎಂಬ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿಕೆಗೆ, ‘ಸಚಿವ ಸ್ಥಾನವನ್ನು ಸಂದರ್ಭಾನುಸಾರವಾಗಿ ನೀಡಲಾಗಿದೆ. ಯಾರಿಗೇ ಅಸಮಾಧಾನವಿದ್ದರೂ ಮುಖ್ಯಮಂತ್ರಿ ಸರಿಪಡಿಸುತ್ತಾರೆ ಎಂದು ಪ್ರತಿಕ್ರಿಯಿಸಿದರು