ಸಂಭ್ರಮದ ಮಕರ ಸಂಕ್ರಮಣದ ಆಚರಣೆ

0

 

ಸಂಕ್ರಾಂತಿ ದಿನದಂದು ದನಕರುಗಳನ್ನು
ವಿಶೇಷವಾಗಿ ಅಲಂಕರಿಸಿ ಮೆರವಣಿಗೆ
ಮಾಡುತ್ತಾರೆ. ರೈತರು ತಾವು ಬೆಳೆದ
ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ
ಅದಕ್ಕೆ ಪೂಜೆ ಮಾಡುತ್ತಾರೆ. ಈ
ಕಾರಣಕ್ಕಾಗಿ ಅದನ್ನು ಸುಗ್ಗಿಯ ಹಬ್ಬ
ಎಂದೂ ಸಹ ಕರೆಯುತ್ತಾರೆ.

ಸೂರ್ಯದೇವನು ತನ್ನ ಏಳು ಕುದುರೆಗಳ ಭವ್ಯ ರಥದಲ್ಲಿ ಮಕರ ರಾಶಿಗೆ ಪ್ರವೇಶಿಸುವ ಕಾಲವನ್ನೇ ಮಕರ ಸಂಕ್ರಾಂತಿ ಎಂದು ಕರೆಯುವರು. ಮಕರ ಸಂಕ್ರಮಣ ದಿನದಿಂದ ಸೂರ್ಯನು ದಕ್ಷಿಣದಿಂದ  ಉತ್ತರ ದಿಕ್ಕಿಗೆ ತಿರುಗಿ ಚಲಿಸುತ್ತಾನೆ. ಅಯನ
ಎಂದರೆ ಚಲಿಸುವುದು. ಸೂರ್ಯದೇವನು ಉತ್ತರ
ದಿಕ್ಕಿಗೆ ಚಲಿಸುವುದರಿಂದ ಉತ್ತರಾಯಣ ಎಂದು
ಕೆರೆಯುವರು.
ಭೂಮಿಯಲ್ಲಿ ದಕ್ಷಿಣಾಯನವಿದ್ದಾಗ ದೇವಲೋಕದಲ್ಲಿ ರಾತ್ರಿ. ದೇವತೆಗಳು ನಿದ್ರಿಸುತ್ತಿರುತ್ತಾರೆ. ಪಿತೃಗಳು ಜಾಗೃತರಾಗಿರುತ್ತಾರೆ. ಉತ್ತರಾಯಣವಿದ್ದಾಗ
ದೇವತೆಗಳಿಗೆ ಹಗಲು. ಅವರು ಜಾಗೃತವಾಗಿರುವ ಈ ಕಾಲದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ. ಉತ್ತರ ಎಂಬ ಪದಕ್ಕೆ ಶ್ರೇಷ್ಠ ಎಂಬ ಅರ್ಥವಿದ್ದು ಉತ್ತರಾಯಣ ಕಾಲದಲ್ಲಿ ಎಲ್ಲಾ ಕಾರ್ಯಗಳ
ನೆರವೇರುವಿಕೆಗೆ ಹೆಚ್ಚು ಪ್ರಶಸ್ತವಾಗಿವೆ. ಆದಕಾರಣ ಭೀಷ್ಮಾಚಾರ್ಯರು ಉತ್ತರಾಯಣ ಬರುವವರೆಗೂ ಜೀವ
ಹಿಡಿದಿದ್ದರು. ನಂತರ ಮರಣ ಹೊಂದಿದರು.
ಪ್ರತಿ ವರ್ಷ ಜನೆವರಿ 14 ಅಥವಾ 15 ( ಪುಷ್ಯಮಾಸದಲ್ಲಿ ) ಬರುವ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲ
ಎನ್ನುತ್ತಾರೆ. ಆ ದಿವಸ ಪುಣ್ಯ ಸ್ಥಳಗಳಿಗೆ ಭೇಟಿ ನೀಡುತ್ತಾರೆ
ಮತ್ತು ವಿವಿಧ ಪುಣ್ಯ ನದಿಗಳಲ್ಲಿ ತೀರ್ಥಸ್ನಾನ ಮಾಡಿ ಭಕ್ತರು
ಪುನೀತರಾಗುತ್ತಾರೆ.
¸

ಸಂಕ್ರಾಂತಿಯ ಹಿಂದಿನ ದಿನವೇ ಭೋಗಿ ಹಬ್ಬ. ಆ ದಿನದಂದು

 

ದಿನನಿತ್ಯದ ಧವಸ ಧಾನ್ಯಗಳನ್ನು ಮತ್ತು ಸಾಮಗ್ರಿಗಳನ್ನು
ಮುತ್ತೈದೆಯರಿಗೆ ಬಾಗಿನ ರೂಪದಲ್ಲಿ ದಾನ ಮಾಡುತ್ತಾರೆ. ಅಂದು ಸಜ್ಜೆ ಹಿಟ್ಟಿನಿಂದ ತಯಾರಿಸಿದ ರೊಟ್ಟಿಗಳಿಗೆ ಬೆಣ್ಣೆ
ಹಚ್ಚಿಕೊಂಡು ಸವಿಯುವುದು . ಹುಗ್ಗಿ (ಹೆಸರು ಬೇಳೆಯ ಅನ್ನ ) ಗೊಜ್ಜು ಸವಿಯುವುದು ಉತ್ತರ ಕರ್ನಾಟಕದ ಜನರ ವೈಶಿಷ್ಟ್ಯವಾಗಿದೆ.
ಸಂಕ್ರಾಂತಿ ದಿನದಂದು ದನಕರುಗಳನ್ನು ವಿಶೇಷವಾಗಿ ಅಲಂಕರಿಸಿ ಮೆರವಣಿಗೆ ಮಾಡುತ್ತಾರೆ.
ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಈ ಕಾರಣಕ್ಕಾಗಿ ಅದನ್ನು ಸುಗ್ಗಿಯ ಹಬ್ಬ ಎಂದೂ ಸಹ ಕರೆಯುತ್ತಾರೆ.
ಸಂಕ್ರಾಂತಿಯ ದಿನ ಪರ್ವಕಾಲದಲ್ಲಿ ಪಿತೃ ದೇವತೆಗಳಿಗೆ ತರ್ಪಣ ಕೊಡುವುದು ಅಂದಿನ ವಿಶೇಷ ಕಾರ್ಯಕ್ರಮಗಳಲ್ಲಿ ಒಂದು. ಮನೆಯಲ್ಲಿ ಎಳ್ಳು ಬೆಲ್ಲವನ್ನು ತಯಾರಿಸಿ “ಎಳ್ಳು ಬೆಲ್ಲ ಹಂಚುವುದು”
ಸಂಕ್ರಾಂತಿಯ ಸಂಪ್ರದಾಯ. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ಮನೆಮನೆಗಳಿಗೆ ಹೋಗಿ ಹಂಚುತ್ತಾರೆ. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂಹುರಿದ ಎಳ್ಳನ್ನು ಸೇರಿಸಿ “ಎಳ್ಳು ಬೆಲ್ಲ”ತಯಾರಿಸಲಾಗುತ್ತದೆ. ಈ ಮಂಗಳಕರ ದಿನದಂದು
ಹತ್ತಿರದ ಜನರನ್ನು ಮತ್ತು ಸಂಬಂಧಿಗಳನ್ನು ಭೇಟಿಯಾಗಿ ಎಳ್ಳುಬೆಲ್ಲವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. “ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ” ಎನ್ನುತ್ತಾರೆ. ದೇವಾಲಯಗಳಿಗೆ ಭೇಟಿ ನೀಡಿ ಭಗವಂತನ ಹಾಗೂ ಗುರುಹಿರಿಯರ ಆಶೀರ್ವಾದ
ಪಡೆಯುತ್ತಾರೆ. 5 ವರ್ಷದೊಳಗಿನ ಮಕ್ಕಳಿಗೆ ಎಳ್ಳು , ಬೆಲ್ಲ, ವಿವಿಧ ರೀತಿಯ ಹಣ್ಣು , ಚುರಮುರಿಯಿಂದ ಕರಿ ಎರೆಯುತ್ತಾರೆ.ಇದರಿಂದ ಅವರಲ್ಲಿನ ಪೀಡೆಗಳು ( ದೋಷಗಳು) ನಿವಾರಣೆಯಾಗಿ ಅವರು ಆರೋಗ್ಯಯುತವಾಗಿ ಜೀವನ ನಡೆಸಲೆಂದು ಹಿರಿಯರು ಹಾರೈಸುತ್ತಾರೆ ಸಂಕ್ರಾಂತಿಯ ಆಚರಣೆಯಲ್ಲಿ ಎಳ್ಳು
ಬೆಲ್ಲದ ಸೇವನೆಯು ಆರೋಗ್ಯಕರವಾಗಿದೆ. ಎಳ್ಳಿಗೆ
ಶಾಖ ಉತ್ಪಾದಿಸುವ ಶಕ್ತಿಯಿರುವುದರಿಂದ ಚಳಿಗಾದಲ್ಲಿ
ಎಳ್ಳಿನೊಂದಿಗೆ ಕೊಬ್ಬರಿ, ಬೆಲ್ಲದ ಸೇವೆನೆಯು ಆರೋಗ್ಯಕ್ಕೆ ಉತ್ತಮವಾಗಿದ್ದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ತಮಿಳುನಾಡಿನಲ್ಲಿ ಪೊಂಗಲ್ ಎಂದು ( ಹೊಸ ಅಕ್ಕಿ ಊಟ ತಯಾರಿಸಿ ಪೂಜಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.) ಮಹಾರಾಷ್ಟ್ರಗಳಲ್ಲಿ ಎಳ್ಳು ಬೆಲ್ಲದ ಚಿಕ್ಕಿ ಅಥವಾ ಲಡ್ಡು ಹಂಚುವರು. ಕೇರಳದ
ಶಬರಿಮಲೈ ದೇವಸ್ಥಾನದಲ್ಲಿ ಉತ್ಸವ ಮಾಡುವರು.
ಒಟ್ಟಾರೆಯಾಗಿ ದೇಶದ ವಿವಿಧೆಡೆಯಲ್ಲಿ ಮಕರ
ಸಂಕ್ರಮಣವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತಾರೆ.
-ಅಂಜನಾ ರಾಘವೇಂದ್ರ ಕುಬೇರ, ಗದಗ