ಬೆಂಗಳೂರು, ಜ. 18- ನಮ್ಮ ಬೆಳಗಾವಿ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಅಧಿಕ ಪ್ರಸಂಗತನದ ಹೇಳಿಕೆ ಖಂಡನೀಯ.
ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ. ಇತ್ಯರ್ಥವಾಗಿರುವ ವಿಷಯವನ್ನು ಕೆಣಕಲು ಬರಬೇಡಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘# ಬೆಳಗಾವಿ ನಮ್ಮದು’ ಎಂದು ಹ್ಯಾಷ್ ಟ್ಯಾಗ್ ಮೂಲಕ ಟ್ವೀಟ್ ಮಾಡಿರುವ ಅವರು, ಬೆಳಗಾವಿ ಗಡಿ ಬಗ್ಗೆ ಮಹಾಜನ ವರದಿಯೇ ಅಂತಿಮ. ಉದ್ಧವ್ ಠಾಕ್ರೆಯವರೇ, ಇತ್ಯರ್ಥವಾಗಿರುವ
ವಿಷಯವನ್ನು ಕೆಣಕಿ ರಾಜಕೀಯ ಮಾಡಲು ಹೋಗ ಬೇಡಿ. ಈಗ ನೀವು ಕೇವಲ ಶಿವಸೈನಿಕ ಅಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಎನ್ನುವುದನ್ನು ಮರೆಯಬೇಡಿ’ ಎಂದಿದ್ದಾರೆ.
ಬೆಳಗಾವಿ ಗಡಿ ಬಗ್ಗೆ ಮಹಾಜನ ವರದಿಯೇ ಅಂತಿಮ.
@uddhavthackeray ಅವರೇ,
ಇತ್ಯರ್ಥವಾಗಿರುವ ವಿಷಯವನ್ನುವ ಕೆಣಕಿ ರಾಜಕೀಯ ಮಾಡಲು ಹೋಗಬೇಡಿ.
ಈಗ ನೀವು ಕೇವಲ ಶಿವಸೈನಿಕ ಅಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಎನ್ನುವುದನ್ನು ಮರೆಯಬೇಡಿ. # ಬೆಳಗಾವಿನಮ್ಮದು
— Siddaramaiah (@siddaramaiah) January 18, 2021
‘ಕರ್ನಾಟಕದ ನೆಲ-ಜಲ-ಭಾಷೆಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಈ ಬಗ್ಗೆ ರಾಜಿಯೂ ಇಲ್ಲ, ರಾಜಕೀಯವೂ ಇಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿಯ ಉದ್ಧಟತನದ ಹೇಳಿಕೆಗೆ ರಾಜ್ಯದ ಮುಖ್ಯಮಂತ್ರಿ ಅಧಿಕೃತವಾಗಿ ತಕ್ಕ ಪ್ರತ್ಯುತ್ತರ ನೀಡಬೇಕು’ ಎಂದೂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿಯವರೇ, ಕನ್ನಡಿಗರು ಶಾಂತಿಪ್ರಿಯರು, ಸಹನಶೀಲರು, ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟವರು. ನಮ್ಮ ಸಜ್ಜನಿಕೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ’ ಎಂದೂ ಅವರು ಹೇಳಿದ್ದಾರೆ.