ಡ್ರಗ್ಸ್‌ ಪ್ರಕರಣ: ನಟಿ ರಾಗಿಣಿಗೆ ಜಾಮೀನು

0

ಹೊಸದಿಲ್ಲಿ, ಜ. 21- ಡ್ರಗ್ಸ್‌ ಪ್ರಕರಣದಲ್ಲಿ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂ ಕೋರ್ಟ್‌ ಗುರುವಾರ ಜಾಮೀನು ಮಂಜೂರು ಮಾಡಿದೆ.

ಅಂತರರಾಷ್ಟ್ರೀಯ ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದ ಆರೋಪದಡಿ ನಟಿಯರು, ಅವರ ಕೆಲ ಸ್ನೇಹಿತರು, ಉದ್ಯಮಿಗಳು ಹಾಗೂ ಇತರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

ಕಳೆದ 140 ದಿನಗಳಿಂದ ರಾಗಿಣಿ ಬಂಧನದಲ್ಲಿದ್ದಾರೆ. ಸಿಸಿಬಿ ಪೊಲೀಸರು ಸೆಪ್ಟೆಂಬರ್‌ 4ರಂದು ಅವರನ್ನು ಬೆಂಗಳೂರಿ ನಲ್ಲಿ ಬಂಧಿಸಿದ್ದರು. ಜಾಮೀನು ನೀಡಲು ರಾಜ್ಯ ಹೈಕೋರ್ಟ್‌ ನಿರಾಕರಿಸಿತ್ತು. ಹೈಕೋರ್ಟ್‌ನ ನವೆಂಬರ್‌ 3ರ‌ ಆದೇಶವನ್ನು ಪ್ರಶ್ನಿಸಿ ರಾಗಿಣಿ, ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿ ಆರ್‌.ಎಫ್‌.ನಾರಿಮನ್‌ ನೇತೃತ್ವದ ಸುಪ್ರೀಂ ಕೋರ್ಟ್‌ ನ್ಯಾಯಪೀಠವು ಜಾಮೀನು ಮಂಜೂರು ನೀಡಿದೆ.

ನಗರದ ತಾರಾ ಹೋಟೆಲ್‌ ಗಳು, ಪಬ್‌ಗಳು ಮತ್ತು ಹೊರವಲಯದ ಫಾರ್ಮ್‌ ಹೌಸ್‌ ಗಳಲ್ಲಿ ಡ್ರಗ್ಸ್‌ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಆರೋಪ ರಾಗಿಣಿ ಮತ್ತು ಸಂಜನಾ ಅವರ ಮೇಲಿದೆ. ಗೋವಾ, ಪಂಜಾಬ್‌, ಮಹಾರಾಷ್ಟ್ರ ರಾಜ್ಯಗಳು ಹಾಗೂ ವಿದೇಶಗಳಿಂದ ಕೊಕೇನ್‌, ಎಂಡಿಎಂಎ ಮತ್ತಿತರ ನಿಷೇಧಿತ ಮಾದಕವಸ್ತುಗಳನ್ನು ತರಿಸಿ, ಪಾರ್ಟಿಗೆ ಬರುತ್ತಿದ್ದವರಿಗೆ ಪೂರೈಕೆ ಮಾಡುತ್ತಿದ್ದ ಆರೋಪವೂ ಇದೆ.

Supreme Court grants bail to Kannada Actress Ragini Dwivedi who is in custody for the past 140 days on a drug charge. @raginidwivedi24 #Ragini pic.twitter.com/fzqhLmeBxF

— Bar & Bench (@barandbench) January 21, 2021

ಇದೇ ಪ್ರಕರಣದಲ್ಲಿ ಸೆ. 8ರಂದು ಸಂಜನಾ ಹಾಗೂ ಪ್ರಶಾಂತ್‌ ಅವರನ್ನು ಬಂಧಿಸಲಾಗಿತ್ತು.

ಸೆ.14ರಿಂದ ಎಲ್ಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದರು. ರಾಗಿಣಿ, ಸಂಜನಾ ಮತ್ತು ಪ್ರಶಾಂತ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಾದಕವಸ್ತು ನಿಯಂತ್ರಣ ಕಾಯ್ದೆ ಪ್ರಕರಣ ವಿಶೇಷ ನ್ಯಾಯಾಲಯ ಸೆ.28ರಂದು ತಿರಸ್ಕರಿಸಿತ್ತು. ಬಳಿಕ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ನಟಿ ಸಂಜನಾ ಗಿಲ್ರಾನಿ ಅವರಿಗೆ ವೈದ್ಯಕೀಯ ಪ್ರಮಾಣ ಪತ್ರ ಆಧರಿಸಿ ಕರ್ನಾಟಕ ಹೈಕೋರ್ಟ್ ಡಿಸೆಂಬರ್‌ 11ರಂದು ಜಾಮೀನು ಮಂಜೂರು ಮಾಡಿದೆ.