ಅತಿಥಿ ಉಪನ್ಯಾಸಕರನ್ನು ಮುಂದುವರಿಸಲು ಎಸಿಗೆ ಮನವಿ

0

ಬೈಲಹೊಂಗಲ- 2020-21ನೇ ಶೈಕ್ಷಣಿಕ ಸಾಲಿಗೆ ಕರ್ನಾಟಕ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ದಿನಾಂಕ: 19-01-2021 ರಂದು ಕಛೇರಿ ಆದೇಶ ಹೊರಡಿಸಲಾಗಿದ್ದು ಅದರಲ್ಲಿ ಖಾಯಂ ಉಪನ್ಯಾಸಕರ ಕಾರ್ಯಭಾರ ಹೊರತುಪಡಿಸಿ ಉಳಿದ ಕಾರ್ಯಭಾರಗಳಿಗೆ 2019-20 ನೇ ಸಾಲಿನಲ್ಲಿ ಕಾರ್ಯ ನಿರ್ವಹಿಸಿರುವ 14,183 ಅತಿಥಿ ಉಪನ್ಯಾಸಕರಲ್ಲಿ ಶೇ 50% ರಷ್ಟು ಮಾತ್ರ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಲು ಆದೇಶಿಸಲಾಗಿದ್ದನ್ನು ಖಂಡಿಸಿ ಗುರುವಾರ ಕರ್ನಾಟಕ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರ ಸಂಘಟಣೆಯ ಪಧಾಧಿಕಾರಿಗಳು ಉಪವಿಬಾಗಾಧಿಕಾರಗಳಿಗೆ ಮನವಿ ಅರ್ಪಿಸಿದರು.
ಇದು ಅವೈಜ್ಞಾನಿಕ ಪ್ರಕ್ರಿಯೆ ಆಗಿದೆ. ಕಾರಣ ಮಹಾವಿದ್ಯಾಲಯಗಳಲ್ಲಿ ಕಳೆದ ಸಾಲಿಗಿಂತಲೂ ಈ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳ ಪ್ರವೇಶಾತಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು ಮತ್ತು ವಿದ್ಯಾರ್ಥಿಗಳ ಅನುಪಾತದ ಆಧಾರದ ಮೇಲೆ ಕಾರ್ಯಭಾರವು ಕೂಡಾ ಹೆಚ್ಚಳವಾಗಿದೆ. ಇಲಾಖೆಯ ಆದೇಶದ ಪ್ರಕಾರ ಶೇ 50% ರಷ್ಟು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವದರಿಂದ ವಿಶ್ವವಿದ್ಯಾಲಯ ನಿಗದಿಪಡಿಸಿದ ಪಠ್ಯಕ್ರಮ ಪೂರ್ಣವಾಗುದಿಲ್ಲ. ಈಗಾಗಲೇ ಕಾಲೇಜುಗಳು ಪ್ರಾರಂಭವಾಗಿದ್ದು ಅತಿಥಿ ಉಪನ್ಯಾಸಕರ ಆಯ್ಕೆಯಾಗದೆ ಎರಡು ತಿಂಗಳಕ್ಕೂ ಹೆಚ್ಚು ದಿನಗಳು ಕಳೆದಿವೆ.
ಸರಕಾರವು ಹಾಗೂ ಕಾಲುಜು ಶಿಕ್ಷಣ ಇಲಾಖೆಯು ಅತಿಥಿ ಉಪನ್ಯಾಸಕರನ್ನು ನಿರ್ಲಕ್ಷಿಸಿದ್ದು ಕೊವಿಡ್‍ದಂತಹ ಮಹಾಮಾರಿಯ ಕಾಲದಲ್ಲಿ ಜೀವನ ನಿರ್ವಹಣೆಯು ಬಹಳ ಚಿಂತಾಜನಕವಾಗಿದೆ. ಅತಿಥಿ ಉಪನ್ಯಾಸಕರಲ್ಲಿ ಅರ್ಹತೆ ಇದ್ದು 10-15 ವರ್ಷಗಳಿಂದ ಅಲ್ಪ ಸಂಬಳಕ್ಕೆ ದುಡಿಯುತ್ತಿರುವ ಅತಿಥಿ ಉಪನ್ಯಾಸಕರಲ್ಲಿ ಶೇ 50% ರಷ್ಟು ತಗೆದುಹಾಕುವದರಿಂದ ಉಪನ್ಯಾಸಕರ ಹೊಟ್ಟೆಯ ಮೇಲೆ ಬರೆ ಎಳೆದಂತಾಗುತ್ತದೆ. ಈಗಾಗಲೆ ನೊಂದ ಅತಿಥಿ ಉಪನ್ಯಾಸಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸುಮಾರು 7,000 ಕ್ಕೂ ಹೆಚ್ಚು ಉಪನ್ಯಾಸಕರನ್ನು ತಗೆದು ಹಾಕುವದರಿಂದ ಅವರ ಜೀವನ ನಿರ್ವಹಿಸಲಾಗದೆ ಸಾವಿಗೆ ಶರಣಾಗುವ ಸಂದರ್ಭವನ್ನು ಸರಕಾರ ತಂದಿಡಬಾರದು.
ಆದ್ದರಿಂದ ದಿ. 19-01-2021 ರಂದು ಆಯುಕ್ತರು ಹೊರಡಿಸಿದ ಆದೇಶವನ್ನು ಹಿಂಪಡೆದು 2019-20 ನೇ ಸಾಲಿಗೆ ಕಾರ್ಯ ನಿರ್ವಹಿಸಿದ ಎಲ್ಲ ಅತಿಥಿ ಉಪನ್ಯಾಸಕರನ್ನು ಮುಂದುವರಿಸಲು ಆದೇಶಿಸಬೇಕು. ಇಲ್ಲವಾದಲ್ಲಿ ಮುಂದಿನ ಅನಾಹುತಗಳಿಗೆ ಮತ್ತು ಕರ್ನಾಟಕದಾದ್ಯಂತ ಉಗ್ರ ಹೋರಾಟಕ್ಕೆ ಸರಕಾರವೇ ನೇರ ಹೊಣೆಯಾಗುತ್ತದೆ. ಕಾರಣ ದಯಾಳುಗಳಾದ ತಾವು ಶೀಘ್ರವೇ ಸಮಸ್ಯೆಯನ್ನು ಪರಿಹರಿಸಿ ಅತಿಥಿ ಉಪನ್ಯಾಸಕರ ಹಿತವನ್ನು ಕಾಯಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಈ ಸಂದರ್ಭದಲ್ಲಿ ಸಂಘಟಣೆಯ ಮುಖಂಡ ರಮೇಶ ಯರಗಟ್ಟಿ, ಗುರುಶಾಂತ ಬಾಗೇವಾಡಿ, ಬಸವರಾಜ ಕರೆದೇಮಣ್ಣವರ, ರಾಯಣಗೌಡಾ ಗೌಡರ, ಡಿ.ಜಿ.ಗೋಕಾಕ, ಮಂಜುನಾಥ ಪಾಟಿಲ, ಸುಮಾ ಸಾವಂತ, ವಿಜಯಕುಮಾರ ಕಟ್ಟಿಮನಿ, ಸಂಗಮೇಶ ಹುಲಗಣ್ಣವರ, ಮೀನಾಕ್ಷಿ ವಕ್ಕುಂದಮಠ, ಪ್ರಸಾದ ವಗ್ಗಣ್ಣವರ, ಮರಿಗೌಡಾ ಚೋಬಾರಿ, ಬಸವರಾಜ ಹುಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು.